ಕಡಬ, ಮಾ.16. ಐತ್ತೂರು ಗ್ರಾಮದ ಮೂಜೂರು ಪ್ರಸಾದ್ ಎಂಬವರ ಮೇಲೆ ಮರ ಕಳ್ಳತನದ ಆರೋಪ ಹೊರಿಸಿ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ನೇತೃತ್ವದ ಅಧಿಕಾರಿಗಳ ತಂಡ ಮಾರ್ಚ್ 2ರ ಮಧ್ಯರಾತ್ರಿ ಮನೆ ಮೇಲೆ ದಾಳಿ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಸ್ಪಂದನ ದೊರೆತಿಲ್ಲ. ಈ ನಿಟ್ಟಿನಲ್ಲಿ ಸೋಮವಾರದಿಂದ ಪ್ರಸಾದ್ ಕುಟುಂಬಸ್ಥರಿಂದ ಕಡಬ ತಾಲೂಕು ಕಛೇರಿ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.
ನೀತಿ ಸಾಮಾಜಿಕ ಸಂಘಟನೆ ಅಧ್ಯಕ್ಷ ಜಯನ್, ಪ್ರಸಾದ್ ಕುಟುಂಬಸ್ಥರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ. ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ದೂರು ದಾಖಲಾಗುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಮರಣಾಂತ ಮೌನ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಕುಟುಂಬಸ್ಥರು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಾವು ಈ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮಧ್ಯಾಹ್ನದ ವೇಳೆಗೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಕಡಬ ತಹಶೀಲ್ದಾರ್ ಅನಂತಶಂಕರ ಅವರು ನೀತಿ ತಂಡದ ಜಯನ್ ಟಿ. ಜೊತೆ ಮಾತುಕತೆ ನಡೆಸಿ ಅರಣ್ಯಾಧಿಕಾರಿಗಳು ಕಾನೂನು ಪ್ರಕಾರ ಕಾರ್ಯಾಚರಣೆ ನಡೆಸಿರುವುದಾಗಿ ದಾಖಲೆಗಳನ್ನು ನೀಡಿದ್ದಾರೆ. ಆದುದರಿಂದ ಪ್ರತಿಭಟನೆ ಹಿಂದೆಗೆದುಕೊಳ್ಳುವಂತೆ ಮನವಿ ಮಾಡಿದರು. ಅದರೆ ಅದಕ್ಕೆ ಒಪ್ಪದ ಪ್ರತಿಭಟನಾ ನಿರತರು ಸತ್ಯಾಗ್ರಹ ಮುಂದುವರಿಸಿದ್ದಾರೆ. ಸಾಯಂಕಾಲ ವೇಳೆಗೆ ಪ್ರಸಾದ್ ಅವರ ತಾಯಿ ಸೀತಮ್ಮ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.
ರಾತ್ರಿಯವರೆಗೂ ಯಾವುದೇ ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಇಂದು ಕೂಡಾ ಮುಂದುವರಿದಿದೆ. ಪ್ರತಿಭಟನೆ ನಿರತರಿಗೆ ತೊಂದರೆಯಾದಲ್ಲಿ ಅರಣ್ಯ ಇಲಾಖೆ, ಜನಪ್ರತಿನಿಧಿಗಳು, ಪೊಲೀಸ್ ಇಲಾಖೆಯೇ ನೇರ ಹೊಣೆಯಾಗುತ್ತದೆ ಎಂದು ನೀತಿ ತಂಡದ ಜಯನ್ ಎಚ್ಚರಿಕೆ ನೀಡಿದ್ದಾರೆ.