(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 15. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕದ ರಾಜ್ಯದಾದ್ಯಂತ ಝೀರೋ ಡ್ರಾಪ್ಔಟ್ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ಉಳ್ಳಾಲದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಿ ಹಿಂದಿರುಗುವ ವೇಳೆ ಗಾಂಜಾ ವ್ಯಸನಿಗಳು ಕ್ಯಾಂಪಸ್ ಫ್ರಂಟ್ ನಾಯಕರ ಮೇಲೆ ಹಲ್ಲೆ ನಡೆಸಿದ್ದು, ಮಾತ್ರವಲ್ಲದೆ ಸ್ಥಳಕ್ಕಾಗಮಿಸಿದ ಉಳ್ಳಾಲ ಪೋಲಿಸರು ಹಲ್ಲೆಗೊಳಗಾದವರನ್ನೇ ಬಂಧಿಸಿ, ಠಾಣೆಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿ, ಧಾರ್ಮಿಕ ನಿಂದನೆ ನಡೆಸಿ, ಮಾರ್ಮಾಂಗಕ್ಕೆ ತಮ್ಮ ಬೂಟುಗಳಿಂದ ಒದ್ದು ತೀವ್ರ ಹಲ್ಲೆ ನಡೆಸಿದ್ದು ಇದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಸಮಿತಿಯು ಬೆಳ್ತಂಗಡಿಯ ಮೂರು ಮಾರ್ಗದ ಬಳಿ ಪ್ರತಿಭಟನೆ ನಡೆಸಲಾಯಿತು.
“ಕ್ಯಾಂಪಸ್ ಫ್ರಂಟ್ ನಾಯಕರನ್ನು ಬಂಧಿಸಿ, ಠಾಣೆಯಲ್ಲಿ ಹಲ್ಲೆ ನಡೆಸಿದ ಪೋಲಿಸರ ನಡೆಯ ಕುರಿತು ತೀವ್ರ ಅಸಮಾಧಾನವಾಗಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಂಡು ಹಲ್ಲೆ ನಡೆಸಿದ ಗಾಂಜಾ ವ್ಯಸನಿಗಳನ್ನು ಬಂಧಿಸಿ, ದರ್ಪ ಮೆರೆದ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಬೇಕೆಂದು” ಪ್ರತಿಭಟನೆಯನ್ನುದ್ದೇಶಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾದ ಸರ್ಫಾರಾಝ್ ಗಂಗಾವತಿ ಮಾತನಾಡಿದರು.
“ವಿದ್ಯಾರ್ಥಿಗಳ ಹೋರಾಟ ನಿರಂತರವಾಗಿರುತ್ತದೆ, ಅಮಾಯಕ ವಿದ್ಯಾರ್ಥಿಗಳಿಗೆ ನ್ಯಾಯ ದೊರಕದಿದ್ದರೆ ದ.ಕ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳನ್ನು ಸೇರಿಸಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಉಳ್ಳಾಲ ಠಾಣೆ ಮುಂಭಾಗದಲ್ಲಿ ಮಾಡುತ್ತೇವೆ ಎಂದು ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಯಾಸೀನ್ ಬಂಗೇರಕಟ್ಟೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಹೀರ್ ಪಾಂಡವರಕಲ್ಲು, ಜೊತೆ ಕಾರ್ಯದರ್ಶಿ ಆರಿಫ್ ಲಾಯಿಲ, ಕೋಶಾಧಿಕಾರಿ ಝಾಹೀದ್ ಹಾಗು ಸಮಿತಿ ಸದಸ್ಯ ಸಿರಾಜ್ ಉಪಸ್ಥಿತರಿದ್ದರು.