(ನ್ಯೂಸ್ ಕಡಬ) newskadaba.com ಕಡಬ, ಮಾ. 09. ತಾಲೂಕಿನ ಎಡಮಂಗಲದ ದಲಿತ ಮಹಿಳೆಯೋರ್ವರ ಮೇಲೆ ಸ್ಥಳೀಯ ನಿವಾಸಿ ರವಿ ಶೆಟ್ಟಿ ಮತ್ತು ಅವರ ಪತ್ನಿ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಜಾತಿನಿಂದನೆ ಮತ್ತು ಕೊಲೆ ಬೆದರಿಕೆಯೊಡ್ಡಿ ದಲಿತ ಮಹಿಳೆಯು ವಾಸಿಸುತ್ತಿದ್ದ ಮನೆಯನ್ನು ಧ್ವಂಸಗೊಳಿಸಿದ್ದು, ಇದನ್ನು ಖಂಡಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಠಾಜೆ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ದೂರು ನೀಡಿದ್ದರು.
ಮಹಿಳೆಯ ದೂರನ್ನು ಸ್ವೀಕರಿಸಿ ಎಫ್.ಐ.ಆರ್ ಕೂಡಾ ಮಾಡಲಾಗಿತ್ತಾದರೂ ಘಟನೆ ಕಳೆದು ವಾರ ಕಳೆದರೂ ರವಿ ಶೆಟ್ಟಿ ಮತ್ತು ಅವರ ಪತ್ನಿಯ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲಿಲ್ಲ ಎಂದು ಮಂಗಳವಾರದಂದು ಬೆಳ್ಳಾರೆ ಪೊಲೀಸ್ ಠಾಣಾ ಮುಂಭಾಗದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಮಹಿಳೆಯ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದಾಗಿ ಮತ್ತು ಠಾಣೆಗೆ ಮುತ್ತಿಗೆ ಹಾಕುವುದಾಗಿ ದ.ಕ ಎಸ್ಪಿ ಅವರಿಗೆ ದೂರು ನೀಡಲಾಗಿದೆ.
ಈ ದೂರಿನನ್ವಯ ಪ್ರತಿಭಟನಾ ಸಂದರ್ಭ ಯಾವುದಾದರೂ ಅನಾಹುತಗಳು ಸಂಭವಿಸಿದಲ್ಲಿ ಬೆಳ್ಳಾರೆ ಠಾಣೆಯ ಪೊಲೀಸರೇ ಕಾರಣರಾಗುತ್ತಾರೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಮಿತಿ ಉಪಾಧ್ಯಕ್ಷ ಮಂಜುನಾಥ ಶಾಂತಿಮೂಲೆ ಉಪಸ್ಥಿತರಿದ್ದರು.