ಕಡಬ: ಮಧ್ಯರಾತ್ರಿ ರೈತನ ಮನೆಗೆ ನುಗ್ಗಿ ದರ್ಪ ತೋರಿದ ಅರಣ್ಯಾಧಿಕಾರಿಗಳು ➤ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸುವಂತೆ ರೈತ ಸಂಘದಿಂದ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಮಾ. 06. ಮರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯಾಧಿಕಾರಿಗಳ ವಿರುದ್ಧ ದೂರು ನೀಡಿದ ದ್ವೇಷದಲ್ಲಿ ಐತ್ತೂರಿನ ಮೂಜೂರು ನಿವಾಸಿ ಪ್ರಸಾದ್ ಎಂಬವರ ಮನೆಗೆ ನಡುರಾತ್ರಿ ನುಗ್ಗಿ ಅನುಚಿತವಾಗಿ ವರ್ತಿಸಿ ದಾಂಧಲೆ ನಡೆಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬಂದಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಸುಳ್ಯ ತಾಲೂಕು ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ ಅವರು ಆಗ್ರಹಿಸಿದ್ದಾರೆ.

ರೈತ ಸಂಘದ ಪದಾಧಿಕಾರಿಗಳ ನಿಯೋಗದೊಂದಿಗೆ ಅರಣ್ಯಾಧಿಕಾರಿಗಳಿಂದ ಕಿರುಕುಳ ಅನುಭವಿಸಿದ ಐತ್ತೂರು ನಿವಾಸಿ ಪ್ರಸಾದ್ ರವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಐತ್ತೂರಿನಲ್ಲಿ ಬಡ ರೈತನ ಮನೆಗೆ ಅರಣ್ಯಾಧಿಕಾರಿಗಳು ತಡರಾತ್ರಿ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನುವ ಸುದ್ದಿ ತಿಳಿದು ನಾವು ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತರ ಜೊತೆ ಮಾಹಿತಿ ಪಡೆದುಕೊಂಡಿದ್ದೇವೆ. ಸುಬ್ರಹ್ಮಣ್ಯ ಅರಣ್ಯ ವಲಯದ ಐತ್ತೂರು ರಕ್ಷಿತಾರಣ್ಯದಲ್ಲಿ ನಡೆದ ಮರಗಳ್ಳತನ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಭಾಗಿಯಾಗಿರುವ ಬಗ್ಗೆ ರೈತ ಪದ್ಮಯ್ಯ ಗೌಡರ ಪುತ್ರ ಪ್ರಸಾದ್ ದೂರು ನೀಡಿದ ದ್ವೇಷದಿಂದ ಅರಣ್ಯ ಇಲಾಖಾಧಿಕಾರಿಗಳು ಮಾ.2ರಂದು ತಡರಾತ್ರಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆ ಹಾಗೂ ವೃದ್ಧೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಕೃಷಿ ಯಂತ್ರಗಳು ಹಾಗೂ ಮನೆಯ ಅಟ್ಟಕ್ಕೆ ಹಾಕಲಾಗಿದ್ದ ಹಳೆಯ ಹಲಗೆಗಳನ್ನು ಕಿತ್ತೊಯ್ದಿದ್ದಾರೆ. ದೂರುದಾರನನ್ನು ಮರಗಳ್ಳತನದ ಪ್ರಕರಣದಲ್ಲಿ ಸಿಲುಕಿಸಲು ಸಂಚು ಹೂಡಿದ್ದಾರೆ. ಬಡ ರೈತನೊಬ್ಬನ ಮನೆಗೆ ರಾತ್ರಿ ವೇಳೆ ನುಗ್ಗಿ ಅಧಿಕಾರಿಗಳು ದೌರ್ಜನ್ಯವೆಸಗಿರುವುದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ರೈತ ಸಂಘದ ನೇತೃತ್ವದಲ್ಲಿ ಸುಬ್ರಹ್ಮಣ್ಯ ಆರಣ್ಯ ಕಚೇರಿ ಮುಂದೆ ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದರು. ರೈತ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಲೋಲಜಾಕ್ಷ ಅವರು ಮಾತನಾಡಿ, ಅರಣ್ಯಾಧಿಕಾರಿಗಳು ರೈತನ ಮನೆಗೆ ನುಗ್ಗಿ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧ. ಬೂಟುಗಾಲಿನಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ನುಗ್ಗಿ ಕೊಲೆಗಡುಕರು, ಭಯೋತ್ಪಾದಕರನ್ನು ನಡೆಸಿಕೊಳ್ಳುವಂತೆ ಮನೆಮಂದಿಯೊಂದಿಗೆ ಅಗೌರವದಿಂದ ನಡೆದುಕೊಂಡಿದ್ದಾರೆ. ರೈತನ ಜೊತೆ ಹೇಗೆ ನಡೆದುಕೊಂಡರೂ ಕೇಳುವವರಿಲ್ಲ ಎನ್ನುವ ದರ್ಪದಿಂದ ದ್ವೇಷ ಸಾಧನೆಗೆ ಮುಂದಾಗಿರುವ ಅಧಿಕಾರಿಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ರೈತ ಸಂಘದ ದ.ಕ.ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ ಸುಳ್ಯ, ಸುಳ್ಯ ತಾಲೂಕು ಉಪಾಧ್ಯಕ್ಷರಾದ ಮಾಧವ ಗೌಡ ಸುಳ್ಯಕೋಡಿ, ಲೋಕೇಶ್ ಕಲ್ಲೇರಿ ಏನೆಕಲ್ಲು, ಕಾರ್ಯದರ್ಶಿ ಭರತ್ಕುಮಾರ್ ಕೆ., ಜಯಪ್ರಕಾಶ್ ನಕ್ರೆಪ್ಪಾಡಿ, ಮಂಜುನಾಥ ಮಡ್ತಿಲ, ಗುಡ್ಡಪ್ಪ ಗೌಡ ಪರ್ಲ, ಬಾಲಕೃಷ್ಣ ಪರಮಲೆ, ರಾಧಾಕೃಷ್ಣ ಪರಮಲೆ, ವೇಣುಗೋಪಾಲ, ಪ್ರವೀಣ್ ಕಟ್ಟ, ವಾಸುದೇವ ಪರಮಲೆ ಮುಂತಾದವರು ನಿಯೋಗದಲ್ಲಿದ್ದರು.

Also Read  ಬ್ಯಾಂಕ್ ನಲ್ಲಿ ಕಳವು ಮಾಡಲು ಯತ್ನ ➤  ಆರೋಪಿ ಅರೆಸ್ಟ್.!

ಪದ್ಮಯ್ಯ ಗೌಡರ ಪತ್ನಿ ಸೀತಮ್ಮ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ದೌರ್ಜನ್ಯವೆಸಗಿದ ಅರಣ್ಯಾಧಿಕಾರಿಗಳ ವಿರುದ್ಧ ದೂರು ನೀಡಿದರೂ ಕಡಬ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎನ್ನುವ ಹಿನ್ನೆಲೆಯಲ್ಲಿ ಕಡಬ ಪೊಲೀಸ್ ಠಾಣೆಗೆ ತೆರಳಿದ ರೈತ ಸಂಘದ ಪದಾಧಿಕಾರಿಗಳು ಎಸ್ಐ ರುಕ್ಮ ನಾಯ್ಕ್ ಜೊತೆ ಮಾತುಕತೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತ ರೈತನಿಗೆ ನ್ಯಾಯ ಒದಗಿಸಬೇಕು. ತಾರತಮ್ಯ ನೀತಿ ಅನುಸರಿಸಿದರೆ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

Also Read  ಮಂಗಳೂರು-ಕಾಸರಗೋಡು ಗಡಿ ಸಂಚಾರಕ್ಕೆ ಮುಕ್ತ: ದ.ಕ. ಜಿಲ್ಲಾಧಿಕಾರಿ

error: Content is protected !!
Scroll to Top