(ನ್ಯೂಸ್ ಕಡಬ) newskadaba.com ಮೈಸೂರು, ಮಾ.04. ಕಡಿಮೆ ಬಡ್ಡಿ ದರದ ಆಮಿಷವೊಡ್ಡಿ ಚಿನ್ನವನ್ನು ಅಡವಿರಿಸಿ ಗ್ರಾಹಕರಿಗೆ ಹಿಂತಿರುಗಿಸದೆ ಮೋಸ ಮಾಡುತ್ತಿದ್ದ ಆರೋಪಿಯ ಹೆಡೆಮುರಿ ಕಟ್ಟಿರುವ ಮೈಸೂರು ಲಷ್ಕರ್ ಠಾಣಾ ಇನ್ಸ್‌ಪೆಕ್ಟರ್ ಕಡಬ ಮೂಲದ ಸುರೇಶ್ ಕುಮಾರ್, ಆರೋಪಿಯಿಂದ 579.39 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ದಿ| ನಾರಾಯಣ ಎಂಬವರ ಪುತ್ರ ಮಂಜುನಾಥ್ (42) ಎಂಬಾತ ಮೈಸೂರಿನ ಇರ್ವಿನ್ ರಸ್ತೆಯಲ್ಲಿ ಬಾಲಾಜಿ ಗೋಲ್ಡ್ ಫೈನಾನ್ಸ್ ನಡೆಸುತ್ತಿದ್ದು, ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲವನ್ನು ನೀಡುತ್ತಿದ್ದ. ತದನಂತರ ಗ್ರಾಹಕರಿಗೆ ಚಿನ್ನವನ್ನು ನೀಡದೆ ಮೋಸ ಮಾಡುತ್ತಿದ್ದ ಎನ್ನಲಾಗಿದೆ. ಶ್ರೀಮತಿ ನಿಂಗಮ್ಮ ಎಂಬವರು ಅಡವಿಟ್ಟ ಚಿನ್ನವನ್ನು ಮಂಜುನಾಥ್ ಹಿಂದಿರುಗಿಸದೆ ಸತಾಯಿಸಿದ ವೇಳೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಪ್ರಕರಣದ ಜಾಡು ಹಿಡಿದ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ಹಾಗೂ ತಂಡ ಆರೋಪಿಯ ಹೆಡೆಮುರಿ ಕಟ್ಟಿದ್ದು, 22 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.