ಕಡಬ: ಹೊಸ್ಮಠ ಸೇತುವೆ ಬಳಿ ಅಮಾಯಕ ಜೀವಗಳನ್ನು ಬಲಿಪಡೆದ ಅಪಾಯಕಾರಿ ಹಂಪ್ ➤ ದಿನಂಪ್ರತಿ ನಡೆಯುತ್ತಿದೆ ಸರಣಿ ಅಪಘಾತ ✍? ನಾಗರಾಜ್ ಎನ್.ಕೆ

✍? ನಾಗರಾಜ್ ಎನ್.ಕೆ.

(ನ್ಯೂಸ್ ಕಡಬ) newskadaba.com ಕವರ್ ಸ್ಟೋರಿ: ಇಲ್ಲಿನ ಹೊಸಮಠ ನೂತನ ಸೇತುವೆಯ ಬಳಿ ಉಪ್ಪಿನಂಗಡಿ-ಕಡಬ ರಾಜ್ಯರಸ್ತೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿರುವ ಹಂಪ್ (ರಸ್ತೆ ಉಬ್ಬು) ನಿಂದಾಗಿ ನಿರಂತರ ಅಪಘಾತಗಳು ನಡೆಯುತ್ತಿದ್ದು, ಜೀವ ಹಾನಿಯೂ ಆಗುತ್ತಿರುವುದು ವಾಹನ ಚಾಲಕರ ಆತಂಕಕ್ಕೆ ಕಾರಣವಾಗಿದೆ.

ಒಂದೂವರೆ ವರ್ಷದ ಹಿಂದೆ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ತೆರೆದುಕೊಂಡ ಬಳಿಕ ಸೇತುವೆಯ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿನ ತಿರುವುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎನ್ನುವ ಕಾರಣಕ್ಕಾಗಿ ಹಂಪ್‌ಗಳನ್ನು ನಿರ್ಮಿಸಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಅಪಘಾತಗಳನ್ನು ತಡೆಯುವುದಕ್ಕಾಗಿ ರಚಿಸಲಾದ ಹಂಪ್‌ಗಳೇ ಅಪಘಾತಕ್ಕೆ ಕಾರಣವಾಗುತ್ತಿವೆ ಎನ್ನುವ ದೂರುಗಳು ವ್ಯಕ್ತವಾಗಿತ್ತು. ಹಂಪ್‌ನಿಂದಾಗಿ ದ್ವಿಚಕ್ರ ವಾಹನಗಳು, ಕಾರು ಹಾಗೂ ಇತರ ಘನವಾಹನಗಳು ಚಾಲಕರ ನಿಯಂತ್ರಣಕ್ಕೆ ಸಿಗದೆ ಅಪಘಾತಗಳಾಗುತ್ತಿವೆ. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದ್ದ ಮಂಗಳೂರು ಮೂಲದ ಯಾತ್ರಿಕರ ಹೊಸ ಕಾರೊಂದು ಹಂಪ್‌ನ ಮೇಲೆ ಚಲಿಸಿದ ಸಂದರ್ಭದಲ್ಲಿ ಕಾರಿನ ತಳಭಾಗಕ್ಕೆ ಹೊಸ ಹಂಪ್ ತಾಗಿ ಹಾನಿಯಾದ ಹಿನ್ನೆಲೆಯಲ್ಲಿ ಕಾರಿನ ದುರಸ್ತಿಗೆ 1 ಲಕ್ಷ ರೂ. ತಗಲಿದ ವಿದ್ಯಮಾನ ನಡೆದಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಸಂಬಧಪಟ್ಟ ಇಲಾಖೆಯವರು ಹಂಪ್‌ನ ಎತ್ತರವನ್ನು ಕೊಂಚ ಕಡಿಮೆ ಮಾಡಿದ್ದರು. ಆದರೂ ಅಪಘಾತಗಳು ಮಾತ್ರ ಕಡಿಮೆಯಾಗಿಲ್ಲ. ದಿನಂಪ್ರತಿ ಎನ್ನುವಂತೆ ಅಪಘಾತಗಳು ನಡೆಯುತ್ತಲೇ ಇವೆ.

Also Read  ಇಷ್ಟದ ವ್ಯಕ್ತಿ ನಿಮ್ಮ ವಶದಲ್ಲಿ ನೋಡಿ ರಾಶಿ ಫಲ


ಎರಡು ಜೀವ ಬಲಿ:
ಹೊಸಮಠದ ಅವೈಜ್ಞಾನಿಕ ಹಂಪ್‌ಗೆ ಈಗಾಗಲೇ ಎರಡು ಜೀವ ಬಲಿಯಾಗಿದೆ. ಕೆಲ ತಿಂಗಳ ಹಿಂದೆ ತಮಿಳುನಾಡು ಮೂಲದ ಕೊಳವೆಬಾವಿ ಕೊರೆಯುವ ಲಾರಿಯ ಕಾರ್ಮಿಕ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಹಂಪ್‌ನಲ್ಲಿ ಬೈಕ್ ಸ್ಕಿಡ್ ಆಗಿ ಆತ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡು ಹಲವು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ರವಿವಾರ (ಫೆ.28) ಹಂಪ್ ಬಳಿ ಬೈಕ್ ಸ್ಕಿಡ್ ಆಗಿ ಬೈಕ್‌ನಲ್ಲಿ ಹಿಂಬದಿ ಸವಾರೆಯಾಗಿ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ವೇಣೂರಿನ ಮಹಿಳೆ ರಸ್ತೆಗೆ ಅಪ್ಪಳಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ನಡೆದ ಇನ್ನೊಂದು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕ 2 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ನಡೆಯಲೂ ಸಾಧ್ಯವಾಗದೇ ಮನೆಯಲ್ಲಿ ವಿಶ್ರಾಂತಿ ಪಡೆಯುವಂತಾಗಿದೆ. ಅಪಘಾತವಾಗದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ರಚನೆಯಾಗಿರುವ ಹೊಸಮಠದ ಹಂಪ್ ಗಳು ಅಮಾಯಕರ ಜೀವಕ್ಕೆ ಎರವಾಗುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಸಮಠದ ಅಪಾಯಕಾರಿ ಹಂಪ್‌ಗಳನ್ನು ಕೂಡಲೇ ತೆರವುಗೊಳಿಸಬೇಕು ಇಲ್ಲವೇ ಅಪಘಾತಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.

Also Read  ಅಮ್ಮ ನಿನ್ನ ಕಿರುಬೆರಳಿನಲ್ಲಿ ನಾನು...... ✍ ಆಶಿತಾ ಎಸ್ ಗೌಡ, ಬಿಳಿನೆಲೆ

ಹೊಸಮಠ ಸೇತುವೆಯ ಬಳಿ ನಿರ್ಮಿಸಲಾಗಿರುವ ಹಂಪ್‌ಗಳಿಂದಾಗಿ ಅಪಘಾತಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್, ಆರ್‌ಟಿಒ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಉನ್ನತಾಧಿಕಾರಿಗಳ ಸೂಚನೆಯಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.
ಉಮೇಶ್ ಉಪ್ಪಳಿಕೆ, ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು.

✍? ನಾಗರಾಜ್ ಎನ್.ಕೆ.

 

error: Content is protected !!
Scroll to Top