(ನ್ಯೂಸ್ ಕಡಬ) newskadaba.com ಕಡಬ, ಫೆ.28. ಪ್ರೇಮ ಪ್ರಕರಣವೊಂದರಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಬಲ್ಯ ಗ್ರಾಮದ ಪುತ್ತಿಲ ಬರೆತ್ತಡಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಪುತ್ತಿಲ ಬರೆತ್ತಡಿ ನಿವಾಸಿ ಕೊರಗಪ್ಪ ಗೌಡ ಎಂಬವರ ಪುತ್ರಿ ರಮ್ಯ(23) ಎಂದು ಗುರುತಿಸಲಾಗಿದೆ. ಈಕೆ ಪಕ್ಕದ ಮನೆಯ ಮಹೇಶ ಎಂಬಾತನನ್ನು ಪ್ರೀತಿಸುತ್ತಿದ್ದು, ಇದಕ್ಕೆ ಮನೆಯವರ ವಿರೋಧವಿತ್ತು. ಇದರಿಂದ ಬೇಸತ್ತ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದ ಯುವತಿಯ ತಾಯಿ ಮನೆಗೆ ವಾಪಾಸ್ಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಡಬ ಠಾಣಾಧಿಕಾರಿ ರುಕ್ಮನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ತಂದೆ ಕೊರಗಪ್ಪ ಗೌಡ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.