(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 28. 2020ನೇ ಸಾಲಿನ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನೀಡುವ ‘ವಿಶೇಷ ಸಾಧಕ ಪ್ರಶಸ್ತಿ’ಗೆ ತುಳು ಜಾನಪದ ಕಲಾ ಸಂಘಟಕ ರಮೇಶ್ ಪಿ. ಮೆಟ್ಟಿನಡ್ಕ ಆಯ್ಕೆಯಾಗಿದ್ದಾರೆ.
ಇವರು ನಾಲ್ಕೂರು ಗ್ರಾಮದ ಪೂಜಾರಿಕೋಡಿ ದಿ.ಮನ್ಚ ಮತ್ತು ದಿ.ಮೆಚ್ಚು ದಂಪತಿಗಳ ಪುತ್ರ. ಇವರು ಮೆಟ್ಟಿನಡ್ಕದಲ್ಲಿ ತರುಣಜ್ಯೋತಿ ಯುವಕ ಮಂಡಲದ ಪದಾಧಿಕಾರಿಯಾಗಿ, ನೇಸರ ಕಲಾ ಸಂಘವನ್ನು ಸಂಘಟಿಸಿ, ತನ್ನದೇ ಕಲಾತಂಡ ರಚಿಸಿ, ಗಾಯಕನಾಗಿ, ಜಾನಪದ ಕುಣಿತ, ಪಾಡ್ದನ, ಜನಪದ ಗೀತೆ ಮೊದಲಾದ ಪ್ರಕಾರಗಳನ್ನು ಕಲಿಸುವುದರೊಂದಿಗೆ, ತುಳು ಭಾಷೆ, ಸಂಸ್ಕೃತಿ ಹಾಗೂ ಆಚರಣೆಗಳ ಬಗ್ಗೆ ಬೆಳಕು ಚೆಲ್ಲುವ, “ತುಳುನಾಡ ವೈಭವ” ಎಂಬ ನೃತ್ಯ ರೂಪಕ ರಚಿಸಿ,ಸುಮಾರು 50 ಜನ ಕಲಾವಿದರ ತಂಡದೊಂದಿಗೆ, ರಾಜ್ಯದಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಜಾನಪದ ಗೀತೆ ಹಾಗೂ ಕುಣಿತಗಳ ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ನಿರ್ಣಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮಾ. 07 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.