(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 27. ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಹಾಗೂ ಅರಂತೋಡು ತೊಡಿಕಾನ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯ ಹಾಗೂ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ 6 ವರ್ಷಗಳ ಕಾಲ ವಜಾಗೊಳಿಸಲಾಗಿದೆ ಎಂದು ಬಿಜೆಪಿ ಸುಳ್ಯ ಮಂಡಲ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಸ್.ಎನ್.ಮನ್ಮಥ ಅವರು ಬಿಜೆಪಿಯ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿ ಜನಪ್ರತಿನಿಧಿ ಸ್ಥಾನವನ್ನು ಅಲಂಕರಿಸಿದ್ದು, ಇದೀಗ ಜಿ.ಪಂ. ಸದಸ್ಯರಾಗಿ ಹಾಗೂ ಐವರ್ನಾಡು ಸೊಸೈಟಿ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲಾ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಬಿಜೆಪಿಯ ಕೆಲಸ ಕಾರ್ಯಗಳಿಗೆ ತಡೆ ಮಾಡುತ್ತಾ ಪಕ್ಷದ ವಿರುದ್ಧ ಸಂಘಟನೆ ಮಾಡುವ ಮೂಲಕ ಪಾರ್ಟಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದ ಮೂಲಕ ಗೌರವ ಮತ್ತು ಅವಕಾಶಗಳನ್ನು ಪಡೆದು ಇದೀಗ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಇವರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರ ಗಮನಕ್ಕೆ ತಂದು, ಎಸ್.ಎನ್. ಮನ್ಮಥರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ 6 ವರ್ಷಗಳ ಕಾಲ ವಜಾಗೊಳಿಸಲು ಸೂಕ್ತ ಕ್ರಮಕ್ಕಾಗಿ ಜಿಲ್ಲಾಧ್ಯಕ್ಷರಿಗೆ ರವಾನಿಸಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿಯ ಕೆಲಸ ಕಾರ್ಯಗಳಿಗೆ ತಡೆಯನ್ನುಂಟು ಮಾಡುತ್ತಾ, ಪಕ್ಷದ ವಿರುದ್ಧವಾಗಿ ಸಂಘಟನೆ ಮಾಡುವ, ಪಾರ್ಟಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿರುವ, ಪಕ್ಷದ ಮೂಲಕವಾಗಿ ಗೌರವ ಮತ್ತು ಅವಕಾಶಗಳನ್ನು ಪಡೆದು ಇದೀಗ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶೈಲೇಶ್ ಅಂಬೆಕಲ್ಲು, ವಿಷ್ಣು ಭಟ್ ಮೂಲೆತೋಟ, ಸಂತೋಷ್ ಕುತ್ತಮೊಟ್ಟೆ ಇವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಪಾರ್ಟಿಯ ಎಲ್ಲಾ ಜವಾಬ್ದಾರಿಗಳಿಂದ 6 ವರ್ಷಗಳ ಕಾಲ ವಜಾಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.