ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಜಿ ಶುಲ್ಕ ಹೆಚ್ಚಿಸುವ ಮೂಲಕ ಸರಕಾರ ಲೂಟಿ ಹೊಡೆಯುತ್ತಿದೆ ➤ ಕ್ಯಾಂಪಸ್‌ ಫ್ರಂಟ್

(ನ್ಯೂಸ್ ಕಡಬ) newskadaba.com ವೈದ್ಯಕೀಯ ಸ್ನಾತಕೋತ್ತರ ಪದವೀಧರ ಪರೀಕ್ಷಾ-2021 ರ ಅರ್ಜಿ ಶುಲ್ಕವನ್ನು ಹೆಚ್ಚಿಸಿದ್ದು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಸರ್ಕಾರದ ಅವೈಜ್ಞಾನಿಕ ಕ್ರಮಗಳಿಂದಾಗಿ ದೇಶದ ಆರ್ಥಿಕತೆ ನೆಲಕಚ್ಚಿದೆ. ಸರ್ಕಾರವು ದಿನನಿತ್ಯ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ, ಪೆಟ್ರೋಲ್- ಡೀಸಲ್ ಬೆಲೆಯನ್ನು ಹೆಚ್ಚಿಸಿದ ಹಾಗೆಯೇ, ಬೇರೆ-ಬೇರೆ ರೀತಿಯ ದಾರಿಗಳನ್ನು ಹುಡುಕಿ ಜನರ ಹಣವನ್ನು ಬೆಲೆ ಏರಿಕೆ, ತೆರಿಗೆ ಮತ್ತು ದಂಡದ ಹೆಸರಲ್ಲಿ ಲೂಟಿ ಹೊಡೆಯುತ್ತಿದೆ. ಇದರ ಭಾಗವೇ ವೈದ್ಯಕೀಯ ಸ್ನಾತಕೋತ್ತರ ಪದವೀಧರ ಪರೀಕ್ಷಾ ಅರ್ಜಿ ಶುಲ್ಕವನ್ನು ಸಹ ಹೆಚ್ಚಿಸಲಾಗಿದೆ.


ಕೋವಿಡ್ ಹಿನ್ನೆಲೆಯಲ್ಲಿ ದೇಶದ ಜನ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿರುವಾಗ, ಸರ್ಕಾರದ ಈ ನಡೆಯು ವಿದ್ಯಾರ್ಥಿಗಳು ಮತ್ತು ಪೋಷಕರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವರ್ಷ ವೈದ್ಯಕೀಯ ಸ್ನಾತಕೋತ್ತರ ಪದವೀಧರ ಪರೀಕ್ಷಾ ಅರ್ಜಿ ಶುಲ್ಕವು ಸಾಮಾನ್ಯ ವರ್ಗಕ್ಕೆ ರೂಪಾಯಿ 3,750 ಹಾಗೂ SC/ST ಮತ್ತು PwD ವರ್ಗಕ್ಕೆ ರೂಪಾಯಿ 2,750 ನಿಗದಿಯಾಗಿತ್ತು. ಆದರೆ ಈ ಸಾಲಿನ ಪರೀಕ್ಷಾ ಅರ್ಜಿ ಶುಲ್ಕವು ಸಾಮಾನ್ಯ ವರ್ಗಕ್ಕೆ ರೂಪಾಯಿ 5,015 ಮತ್ತು SC/ST ಮತ್ತು PwD ವರ್ಗಕ್ಕೆ ರೂಪಾಯಿ 3,835 ನಿಗದಿಪಡಿಸಲಾಗಿದೆ. ಸರ್ಕಾರದ ಈ ಶುಲ್ಕ ಹೆಚ್ಚಳದ ಕ್ರಮವು ವಿದ್ಯಾರ್ಥಿ ವಿರೋಧಿಯಾಗಿದ್ದು ಮತ್ತು ಅಧಿಕಾರದಲ್ಲಿರುವ ಸರ್ಕಾರದ ಪ್ರತಿನಿಧಿಗಳು ಸರ್ಕಾರ ನಡೆಸಲು ಅಯೋಗ್ಯರೆಂಬುವುದಕ್ಕೆ ಸಾಕ್ಷಿಯಾಗಿದೆ. ತಕ್ಷಣವೇ ಸರ್ಕಾರವು ವೈದ್ಯಕೀಯ ಶಿಕ್ಷಣ ಇಲಾಖೆಗೆ ನಿರ್ದೇಶನವನ್ನು ನೀಡಿ ಶುಲ್ಕ ಹೆಚ್ಚಳದ ಆದೇಶವನ್ನು ಹಿಂಪಡೆದು ತನ್ನ ನೈತಿಕತೆಯನ್ನು ಉಳಿಸಿಕೊಳ್ಳಬೇಕು, ಇಲ್ಲದಿದ್ದರೆ ಇದರ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಲಿದ್ದಾರೆ ಎಂದು ಸ್ವದಕತ್ ಶಾಹ್ ಎಚ್ಚರಿಸಿದ್ದಾರೆ.

Also Read  ಬ್ಲೂವೇಲ್ ನಂತರ ಇದೀಗ ಧಾರವಾಹಿ ಸರದಿ ► ಧಾರವಾಹಿ ನೋಡಿ ಮೈಗೆ ಬೆಂಕಿ ಹಚ್ಚಿಕೊಂಡ ಮಗು ಮೃತ್ಯು

error: Content is protected !!
Scroll to Top