(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 25. ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿನಿತ್ಯ ಬಂದು ಹೋಗುವವರಿಗೆ ಕೋವಿಡ್ ನೆಗೆಟಿವ್ ವರದಿ ಅಗತ್ಯವಿಲ್ಲ, ಅವರು ಆರೋಗ್ಯ ಸೇತು ಆಪ್ ಹೊಂದಿರುವುದು ಕಡ್ಡಾಯ. ಕೇರಳದಿಂದ ಬಂದು ದ.ಕ.ದಲ್ಲಿ ವಾಸ್ತವ್ಯ ಹೂಡುವವರು ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು. ಈ ಕುರಿತು ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅವರು ತಿಳಿಸಿದ್ದಾರೆ.
ಕೇರಳದಿಂದ ಮಂಗಳೂರಿಗೆ ಶಾಲಾ- ಕಾಲೇಜು, ಅಸ್ಪತ್ರೆ, ವ್ಯವಹಾರ ನಿಮಿತ್ತ ಪ್ರತಿದಿನ ಬಂದು ಹೋಗುವವರು ಕೊರೋನಾ ನೆಗೆಟಿವ್ ವರದಿ ಪಡೆದುಕೊಳ್ಳುವ ಅಗತ್ಯವಿಲ್ಲ. ಆದರೆ, ಕೋವಿಡ್‌ಗೆ ಸಂಬಂಧಿಸಿ ಮುನ್ನೆಚ್ಚರಿಕಾ ಕ್ರಮ ವಹಿಸುವುದು, ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ. ಈ ಮೂಲಕ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಕೇರಳದಿಂದ ಬರುವವರಿಗೆ ಗಡಿ ನಿರ್ಬಂಧ ಆದೇಶದಿಂದ ಸಡಿಲಿಕೆ ನೀಡುವುದಾಗಿ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.