(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 24. ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದ ಆರೋಪದ ಮೇರೆಗೆ ಮಂಗಳೂರು ನಗರ ಸರ್ವೇಯರ್ ಗಂಗಾಧರ್ ಅವರನ್ನು ಎಸಿಬಿ ಅಧಿಕಾರಿಗಳ ಬಂಧಿಸಿದ್ದಾರೆ..
ನಗರದಲ್ಲಿ ಉದ್ಯಮಿಯೋರ್ವರು ತಮ್ಮ ಕಚೇರಿಗೆ ಪೀಠೋಪಕರಣ ಮಾಡಿಸಲೆಂದು ತಮ್ಮ ಮನೆಯ ಆವರಣದಲ್ಲಿದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿಗೆಂದು ಕೋರಿಕೆ ಪತ್ರ ಸಲ್ಲಿಸಿದ್ದು, ಮಂಗಳೂರು ನಗರ ಅರಣ್ಯ ಇಲಾಖೆಯು ಈ ಪತ್ರವನ್ನು ಕಂದಾಯ ಇಲಾಖೆಗೆ ಕಳುಹಿಸಿತ್ತು. ಒಂದು ತಿಂಗಳು ಕಳೆದರೂ ಸ್ಥಳ ಪರಿಶೀಲನೆ ನಡೆಸಲು ಬಾರದ ಸರ್ವೇಯರ್ ಗಂಗಾಧರ್, ಸ್ಥಳ ಪರಿಶೀಲನೆ ನಡೆಸಲು 3,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರೂ. ಹಾಗೂ ಇವರಿಗೆ 3,000 ರೂ. ಕೊಟ್ಟಿದ್ದು, ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡಲು ಉದ್ಯಮಿಗೆ ಮತ್ತೆ 30,000 ರೂ. ಡಿಮಾಂಡ್ ಇರಿಸಿದ್ದರು ಎನ್ನಲಾಗಿದೆ. ಈ ಕುರಿತು ಉದ್ಯಮಿಯು ಮಂಗಳೂರಿನ ಪರಿಸರ ಸಂರಕ್ಷಣಾ ಸದಸ್ಯರ ಗಮನಕ್ಕೆ ತಂದಿದ್ದು, ನಂತರ ಈ ವಿಚಾರವನ್ನು ಮಂಗಳೂರಿನ ಎಸಿಬಿ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಮಂಗಳೂರಿನ ಮಿನಿ ವಿಧಾನಸೌಧದ ಎದುರು 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಸಾಕ್ಷಿ ಸಮೇತ ಸರ್ವೇಯರ್ ಗಂಗಾಧರ್ ಅವರನ್ನು ಎಸಿಬಿ ತಂಡ ಬಂಧಿಸಿದೆ ಎನ್ನಲಾಗಿದೆ.