(ನ್ಯೂಸ್ ಕಡಬ) newskadaba.com ಕಾಪು, ಫೆ.21. ದೇಶದಾದ್ಯಂತ ಕೊರೋನದ ಎರಡನೇ ಅಲೆಯು ಹೆಚ್ಚುತ್ತಿರುವ ಹಿನ್ನೆಲೆ ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಿಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸುವ ಕುರಿತು ಚರ್ಚೆಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಾಪುವಿನಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ವಸತಿ ಗೃಹಗಳ ಉದ್ಘಾಟನೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಹಾಗೂ ಮಹಾರಾಷ್ಟ್ರಗಳ ಜೊತೆ ನಮ್ಮ ಜಿಲ್ಲೆಗಳಿಗೆ ವ್ಯಾಪಾರ ಸಂಬಂಧವಿದ್ದು, ಕೇರಳಕ್ಕೆ ಪ್ರತೀದಿನ ಓಡಾಟ ನಡೆಯುತ್ತಿದೆ. ಕೇರಳದಿಂದ ಕರ್ನಾಟಕಕ್ಕೆ ಬರಲು 15-16 ರಸ್ತೆಗಳಿದ್ದು, ಇದರಲ್ಲಿ ಪ್ರಮುಖ ಮಾರ್ಗಗಳಿಗೆ ಸಂಪರ್ಕ ಸೀಮಿತಗೊಳಿಸಿ ಉಳಿದ ರಸ್ತೆಗಳನ್ನು ಬಂದ್ ಮಾಡಲು ಚಿಂತನೆ ನಡೆಯುತ್ತಿದೆ. ಅಲ್ಲದೇ ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಕೋವಿಡ್ ಪರೀಕ್ಷಾ ವರದಿ ಸಲ್ಲಿಸಬೇಕು ಎಂಬ ನಿಯಮ ಕಡ್ಡಾಯಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.