(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 21. ದೇಶದಾದ್ಯಂತ ದಿನೇ ದಿನೇ ಕೊರೋನಾ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ದ.ಕ ಜಿಲ್ಲೆಗೆ ಬರುವಂತಹ ಪ್ರಮುಖ ಗಡಿ ಹಾಗೂ ಚೆಕ್ ಪೋಸ್ಟ್ ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೇರಳದಿಂದ ಮಂಗಳೂರು ತಲಪಾಡಿ, ಸಾರಡ್ಕ, ಮೇಣಾಲ ಮತ್ತು ಜಾಲ್ಸೂರು ಹೊರತುಪಡಿಸಿ ಉಳಿದೆಲ್ಲಾ ಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ತೆರೆದಿರುವಂತಹ ಪ್ರತೀ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಬೇಕು. ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರು 72 ಗಂಟೆಗಳೊಳಗೆ ನಡೆಸಲಾದ ನೆಗೆಟಿವ್ ವರದಿ ಕಡ್ಡಾಯವಾಗಿ ತರಬೇಕು. ಅದನ್ನು ಪರಿಶೀಲಿಸಿದ ಬಳಿಕ ಜಿಲ್ಲೆಗೆ ಪ್ರವೇಶ ಇರುತ್ತದೆ. ಪೊಲೀಸ್ ಇಲಾಖೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಚೆಕ್ ಪೋಸ್ಟ್ ಗಳಲ್ಲಿ ಜಿಲ್ಲೆಯನ್ನು ಪ್ರವೇಶಿಸುವ ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸಬೇಕು. ಎಲ್ಲಾ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೂಡಾ ಕಡ್ಡಾಯವಾಗಿ ನೆಗೆಟಿವ್ ವರದಿ ಇರುವ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಪ್ರಯಾಣಿಸಲು ಅವಕಾಶ ನೀಡಬೇಕು ಆಯಾ ಬಸ್ಸಿನ ನಿರ್ವಹಕರು ಕ್ರಮ ವಹಿಸಬೇಕು. ಪ್ರತಿ ಹದಿನೈದು ದಿನಕ್ಕೊಮ್ಮೆ ಕೋವಿಡ್ ನೆಗೆಟಿವ್ ವರದಿ ಚೆಕ್ ಪೋಸ್ಟ್ ಗೆ ಸಲ್ಲಿಸಬೇಕು. ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು ರ್ಯಾಂಡಮ್ ಪರೀಕ್ಷೆಗೊಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.