(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 20. ಫಾಸ್ಟ್ ಟ್ಯಾಗ್ ಅಳವಡಿಸದ ಕಾರಣಕ್ಕೆ ಟೋಲ್ ಗೇಟ್ ನಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡಿದ ಘಟನೆ ನಡೆದಿದೆ.
ಉಪ್ಪಳ ನಿವಾಸಿ ಸಂದೇಶ್ ಎಂಬವರು ಬೆಳಗ್ಗೆ 11 ಗಂಟೆಯ ವೇಳೆಗೆ ಮನೆ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಫಾಸ್ಟ್ ಟ್ಯಾಗ್ ಇಲ್ಲದೇ 80 ರೂ. ಸುಂಕ ಕಟ್ಟಿದ್ದರು. ಬಳಿಕ ಟೋಲ್ ಗೇಟ್ ಬಳಿಯಲ್ಲಿ ಕೌಂಟರ್ ನಲ್ಲಿ ಫಾಸ್ಟ್ ಟ್ಯಾಗ್ ಖರೀದಿಸಿದ್ದು, ಎರಡು ಗಂಟೆಗಳ ಬಳಿಕ ಚಾಲ್ತಿಗೆ ಬರುವುದಾಗಿ ಸಿಬ್ಬಂದಿ ತಿಳಿಸಿದ್ದರು. ಬಳಿಕ ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಸಿಬಂದಿ ಟೋಲ್ ಕೇಳಿದ್ದಾರೆ. ಅದಾಗಲೇ ಸುಂಕ ಕಟ್ಟಿರುವುದಾಗಿ ರಶೀದಿ ತೋರಿಸಿದಾಗ ಕಾರಿನ ನಂಬರ್ ತಪ್ಪಾಗಿ ನಮೂದಿಸಿ 80ರೂ. ಸುಂಕ ಪಡೆಯಲಾಗಿತ್ತು. ಇದರಿಂದ ಸುಮ್ಮನಾದ ಸಂದೇಶ್ ಪುನಃ ಮಂಗಳೂರಿಗೆ ತಲುಪಿದಾಗ ಫಾಸ್ಟ್ ಟ್ಯಾಗ್ ನಿಂದ 40 ರೂ. ಕಡಿತಗೊಂಡಿರುವುದು ಗಮನಕ್ಕೆ ಬಂದಿದೆ. ಈ ಎಡವಟ್ಟಿನಿಂದಾಗಿ ಸಂದೇಶ್ 200 ರೂ ಟೋಲ್ ಪಾವತಿಸಿದಂತಾಗಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸದ್ದಾರೆ.