ಸುಬ್ರಹ್ಮಣ್ಯ ಕುಕ್ಕೇ ದೇವಳದಲ್ಲಿ ಪ್ರತೀ ತಿಂಗಳಿಗೊಮ್ಮೆ ಸಾಮೂಹಿಕ ವಿವಾಹ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 20. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕುಕ್ಕೆ ದೇವಳದಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ಪ್ರತೀ ತಿಂಗಳಿಗೊಮ್ಮೆ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 2021 ನೇ ಸಾಲಿನ ಮಾ.31, ಎ.25, ಮೇ.21, ಜೂ.27 ಹಾಗೂ ಜು.07ರಂದು ಸರಳ ಸಾಮೂಹಿಕ ವಿವಾಹವು ಬೆಳಗ್ಗೆ ಅಭಿಜಿನ್ ಲಗ್ನ ಸುಮೂಹೂರ್ತದಲ್ಲಿ ಸಂಪ್ರದಾಯಗಳಿಗೆ ಅನುಗುಣವಾಗಿ ನೆರವೇರಲಿದೆ ಎಂದು ಶ್ರೀ ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಅವರು ತಿಳಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮೂಹಿಕ ವಿವಾಹವಾಗಲು ಬಯಸುವ ವಧು ವರರು ಶ್ರೀ ದೇವಳದ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದುಕೊಳ್ಳಬಹುದು ಎಂದರು. ಹಾಗೆಯೇ ಸರಳ ವಿವಾಹವಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್, ಶಲ್ಯ, ಪೇಟ, ಬಾಸಿಂಗ ಇತ್ಯಾದಿಗಳಿಗೆ ರೂ.5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ, ಕಾಲುಂಗುರ ಇತ್ಯಾದಿಗಳಿಗೆ ರೂ.10 ಸಾವಿರ ನೀಡಲಾಗುವುದು. ಅಲ್ಲದೇ 40 ಸಾವಿರ ರೂ. ಮೌಲ್ಯದ ಅಂದಾಜು 8 ಗ್ರಾಂ ತೂಕದ ಚಿನ್ನಾಭರಣ ನೀಡಲಾಗುವುದು. ಕಂದಾಯ ಇಲಾಖೆ ವತಿಯಿಂದ ಆದರ್ಶ ವಿವಾಹ ಯೋಜನೆಯಡಿಯಲ್ಲಿ ರೂ.10 ಸಾವಿರದ ನಿಶ್ಚಿತ ಠೇವಣಿ ನೀಡಲಾಗುವುದು. ಅಲ್ಲದೆ ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವ ಪರಿಶಿಷ್ಠ ಜಾತಿಯ ಜೋಡಿಗೆ ಸರಳ ವಿವಾಹ ಯೋಜನೆಯಡಿಯಲ್ಲಿ ರೂ.50 ಸಾವಿರ ನೀಡಲಾಗುವುದು. ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಾಲಯದಿಂದ ಮಾಡಲಾಗುವುದು ಎಂದರು. ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ, ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ ಕುಮಾರ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು.

Also Read  2025ನೇ ಫೆಬ್ರವರಿ 18 ರಿಂದ 23ರ ತನಕ ಕುಂತೂರು-ಬೇಳ್ಪಾಡಿ ದರ್ಗಾ ಶರೀಫ್ ಉರೂಸ್ ಸಮಾರಂಭ

error: Content is protected !!
Scroll to Top