ಉಪ್ಪಿನಂಗಡಿ: ದಿಶಾರವಿ ಬಂಧನ ವಿರೋಧಿಸಿ NWF ವತಿಯಿಂದ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆ ➤ ಶೀಘ್ರ ಬಿಡುಗಡೆಗೆ ಒತ್ತಾಯಿಸಿ ಉಪತಹಶೀಲ್ದಾರ್ ಮೂಲಕ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 20. ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ ಬರ್ಗ್ ಟೂಲ್‌ ಕಿಟ್ ವಿಚಾರವಾಗಿ ಕರ್ನಾಟಕದ ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿಯವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಉಪ್ಪಿನಂಗಡಿ ನ್ಯಾಷನಲ್ ವುಮೆನ್ಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಉಪ್ಪಿನಂಗಡಿ ನಾಡ ಕಚೇರಿ ಮುಂಭಾಗದಲ್ಲಿ ಭಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ NWF ಉಪ್ಪಿನಂಗಡಿ ವಲಯಾಧ್ಯಕ್ಷೆ ಮುಮ್ತಾಜ್ ಮಾತನಾಡಿ, ದೇಶದಾದ್ಯಂತ ನ್ಯಾಯಪರ ಹೋರಾಟಗಾರರು ಮತ್ತು ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದು, ರೈತ ವಿರೋಧಿ ಹಾಗೂ ಜನವಿರೋಧಿ ಕಾನೂನುಗಳನ್ನು ತಂದು ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ಮೋದಿ ನೇತೃತ್ವದ ಕೇಂದ್ರ ಸರಕಾರ ನಡೆಸುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸುವ ರೈತರು ಮತ್ತು ಹೋರಾಟಗಾರರನ್ನು ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಮೂಲಕ ಜೈಲಿಗಟ್ಟಿ ಹೋರಾಟವನ್ನು ತಡೆಯುವ ಪ್ರಯತ್ನ ಮಾಡುತ್ತಿದೆ. ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಕೂಡಾ ಇದರ ಮುಂದುವರಿದ ಭಾಗವಾಗಿದೆ. ಆದಷ್ಟು ಬೇಗ ದಿಶಾ ರವಿಯನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಉಪತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟಿನ ಕಾರ್ಯಕರ್ತೆಯರಾದ ಸೌದ, ಝರೀನಾ, ನಫೀಸಾ, ಫೌಝಿಯಾ, ನಸೀಮಾ, ಸಫಿಯಾ, ಶರೀಫಾ ಮೊದಲಾದವರು ಉಪಸ್ಥಿತರಿದ್ದರು.

Also Read  ಬಸ್ ನಿಲ್ಲಿಸುವ ಮೊದಲೇ ಬಾಗಿಲು ತೆರೆದು ಕೆಳಗೆ ಬಿದ್ದ ಮಹಿಳೆ ಮೃತ್ಯು.!

error: Content is protected !!
Scroll to Top