(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್ 08. ದಕ್ಷಿಣ ಕನ್ನಡ ಅಥವಾ ಮಂಗಳೂರು ಅಂದ್ರೆ ಯಾವಾಗಲೂ ಕೋಮು ಗಲಭೆ, ಹೊಡೆದಾಟ, ಬಡಿದಾಟದ ಸುದ್ದಿಗಳ ಮೂಲಕವೇ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಜಿಲ್ಲೆ. ಮಂಗಳೂರಿನ ಬಗ್ಗೆ ಹೊರಗಿನವರಲ್ಲಿ ಇದು ಕೆಟ್ಟ ಅಭಿಪ್ರಾಯ ಮೂಡಿಸಿದ್ದೂ ಇದೆ. ಇದರ ಮಧ್ಯೆ ಮಂಗಳೂರಿನಲ್ಲಿಯೂ ಕೋಮು ಸಾಮರಸ್ಯ ಇದೆ ಅಂತ ತೋರಿಸಿಕೊಡುವ ಅಪರೂಪದ ಘಟನೆಗಳು ನಡೆಯುತ್ತಿರುತ್ತವೆ. ಅದಕ್ಕೆ ಸಾಕ್ಷಿಯೆಂಬಂತೆ ಮಂಗಳೂರಿನ ಹಿಂದೂ ಸಹೋದರನೋರ್ವ ಮುಸಲ್ಮಾನರ ಧರ್ಮಗುರುಗಳ ನಿದ್ದೆಗೆ ಭಂಗವುಂಟುಮಾಡದೆ ತನ್ನ ಭುಜವನ್ನೇ ನೀಡಿದ ಸ್ವಾರಸ್ಯಕರ ಘಟನೆ ಇದೀಗ ಫೇಸ್‌ಬುಕ್ ನಲ್ಲಿ ವೈರಲ್ ಆಗಿದೆ.
ಬಾಲಕೃಷ್ಣ ಶೆಟ್ಟಿ ಎಂಬವರು ಜೂನ್ 05 ರಂದು ಮಂಗಳೂರಿನಿಂದ ವಿಟ್ಲ ಕಡೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ತನ್ನ ಹೆಗಲ ಮೇಲೆ ಮಲಗಿದ ಮುಸ್ಲಿಂ ಸಹೋದರನೋರ್ವರ ಕಥೆಯನ್ನು ಆಂಗ್ಲ ಭಾಷೆಯಲ್ಲಿ ತನ್ನ ಫೇಸ್‌ಬುಕ್ ವಾಲ್‌ನಲ್ಲಿ ಹಂಚಿಕೊಂಡಿದ್ದರು. ಆ ಘಟನೆಯು ಇದೀಗ ವೈರಲ್ ಆಗಿದ್ದು, ಆ ಫೇಸ್ಬುಕ್ ಪೋಸ್ಟನ್ನು 3 ಸಾವಿರಕ್ಕಿಂತಲೂ ಹೆಚ್ಚಿನ ಜನ ಶೇರ್ ಮಾಡಿದ್ದಾರೆ. ಜೊತೆಗೆ 12 ಸಾವಿರಕ್ಕಿಂತಲೂ ಅಧಿಕ ಲೈಕ್‍ಗಳು ಬಂದಿದೆ. ಇದಲ್ಲದೆ ಸುಮಾರು ಮೂರು 3 ಸಾವಿರಕ್ಕೂ ಅಧಿಕ ಜನ ಇದಕ್ಕೆ ಕಮೆಂಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ ಮತ್ತು ಸಂದೇಶ ಹರಿದಾಡುತ್ತಿದೆ.
ಬಾಲಕೃಷ್ಣ ಶೆಟ್ಟಿಯವರು ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಹಂಚಿಕೊಂಡ ಘಟನೆಯ ಕನ್ನಡ ಅನುವಾದ ಹೀಗಿದೆ, ‘ನಾನು ಮಂಗಳೂರಿನಿಂದ ವಿಟ್ಲಕ್ಕೆ ತೆರಳುತ್ತಿದ್ದ ಸಂದರ್ಭ ನನ್ನ ಬಳಿ ಮೌಲಾನ ಒಬ್ಬರು ಕುಳಿತಿದ್ದರು. ರಂಜಾನ್ 10ನೇ ಉಪವಾಸದ ವೇಳೆ ತೀವ್ರವಾಗಿ ಬಳಲಿದ್ದರು. ಈ ವೇಳೆ ತನಗೆ ಗೊತ್ತಿಲ್ಲದಂತೆ ನನ್ನ ಭುಜದ ಮೇಲೆ ಒರಗಿ ಮಲಗಿದ್ದರು. ಆಗ ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಿರಲಿಲ್ಲ. ಮಲಗುವ ವೇಳೆ ಅವರು ನನ್ನ ಧರ್ಮ ಕೇಳಿರಲಿಲ್ಲ. ಕಲ್ಲಡ್ಕ ತಲುಪುವ ವೇಳೆ ನನ್ನ ಭುಜದ ಮೇಲೆ ಸರಿಯಾಗಿ ಮಲಗಿ ಎಂದೆ. ಈ ವೇಳೆ ಅವರ ಕೃತಜ್ಞತಾ ಭಾವ ನೋಡಿ ಆನಂದಪಟ್ಟೆ. ಧರ್ಮಕ್ಕಿಂತ ಮಾನವೀಯತೆಯನ್ನು ಗೌರವಿಸಿ’.