(ನ್ಯೂಸ್ ಕಡಬ) newskadaba.com ಹಾಸನ, ಫೆ. 12. ಪರಿಶಿಷ್ಟ ಜಾತಿಗೆ ಮೀಸಲಿಡಲಾದ ಸ್ಮಶಾನದಲ್ಲಿ ಮತಾಂತರಗೊಂಡ ವೃದ್ಧೆಯೋರ್ವರ ಅಂತ್ಯಕ್ರಿಯೆಯನ್ನು ನಡೆಸಲು ಗ್ರಾಮಸ್ತರು ವಿರೋಧ ವ್ಯಕ್ತಪಡಿಸಿದ ಘಟನೆ ಹೋಬಳಿಯ ವಳ್ಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹಿರಿಯೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಪುಟ್ಟಮ್ಮ ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದಿದ್ದ ಇವರು ಸೋಮವಾರದಂದು ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಗೆಂದು ಸ್ಮಶಾನದಲ್ಲಿ ಸಿದ್ಧತೆ ನಡೆಸಲಾಗಿತ್ತಾದರೂ ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ‘ಹಿಂದೂ ಪದ್ಧತಿಯಂತೆ ಅಂತ್ಯಕ್ರಿಯೆ ಮಾಡುವುದಾದರೆ ಮಾತ್ರ ಇಲ್ಲಿ ಮಾಡಿ, ಇಲ್ಲದಿದ್ದಲ್ಲಿ ಬೇಡ’ ಎಂದು ಹೇಳಿದ್ದಾರೆ. ಇದರಿಂದ ಸ್ಥಳದಲ್ಲಿ ತುಸು ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು, ಪರಿಸ್ಥಿತಿಯನ್ನು ತಿಳಿಗೊಳಿಸಿದ ಬಳಿಕ ವೃದ್ಧೆಯ ಅಂತ್ಯಕ್ರಿಯೆಯನ್ನು ಕುಟುಂಬದವರು ಖಾಸಗಿ ಜಾಗದಲ್ಲಿ ನೆರವೇರಿಸಿದ್ದಾರೆ.