ಸುಬ್ರಹ್ಮಣ್ಯ: ರಕ್ಷಿತಾರಣ್ಯದಲ್ಲಿ ಲಕ್ಷಾಂತರ ರೂ. ಮೌಲ್ಯದ ಮರಗಳ ಕಳ್ಳತನ ಪ್ರಕರಣ ? ಮಾಧ್ಯಮ ಪ್ರತಿನಿಧಿಗಳನ್ನು ತಡೆದ ಸಂಚಾರಿ ದಳದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹ

ಕಡಬ: ಸುಬ್ರಹ್ಮಣ್ಯ ಸುಬ್ರಹ್ಮಣ್ಯ ವಲಯದ ಐತ್ತೂರು ರಕ್ಷಿತಾರಣ್ಯದ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಶಾಮೀಲಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆನ್ನುವ ಸುದ್ದಿಯ ಹಿನ್ನಲೆಯಲ್ಲಿ ಕಡಬದ ಮಾಧ್ಯಮ ವರದಿಗಾರರು ವರದಿ ಮಾಡುವುದಕ್ಕಾಗಿ ಸ್ಥಳಕ್ಕೆ ತೆರಳುತ್ತಿದ್ದಾಗ ತನಿಖಾಧಿಕಾರಿಯಾಗಿ ಆಗಮಿಸಿದ್ದ ಮಂಗಳೂರು ಅರಣ್ಯ ಸಂಚಾರ ದಳದ ಪ್ರಭಾರ ಅಧಿಕಾರಿ ಸಂಧ್ಯಾ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಲು ನಿರ್ಬಂಧ ಹೇರಿರುವುದು ಮತ್ತು ವರದಿಗಾರರೊಂದಿಗೆ ದರ್ಪದಿಂದ ಮಾತನಾಡಿ ಅರಣ್ಯದೊಳಗೆ ಪ್ರವೇಶಿಸಿದರೆ ಮುಂದೆ ನಿಮಗೆ ಆಗುವ ಸಮಸ್ಯೆಗಳಿಗೆ ನಾವು ಹೊಣೆಯಲ್ಲ ಎಂದು ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿ ಸಮಾಜಕ್ಕೆ ಪ್ರಕರಣದ ಬಗೆಗಿನ ನೈಜ ವಿಚಾರವನ್ನು ತಿಳಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಧ್ಯಮ ಪ್ರತಿನಿಧಿಗಳ ಜೊತೆ ಅಗೌರವದಿಂದ ನಡೆದುಕೊಂಡಿರುವುದನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ.

ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದರೊಂದಿಗೆ ಪತ್ರಕರ್ತರ ಗೌರವಕ್ಕೆ ಚ್ಯುತಿ ತಂದಿರುವ ಅಧಿಕಾರಿಯ ವಿರುದ್ದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಾ, ಪತ್ರಕರ್ತರು ನಿರ್ಭಿತಿಯಿಂದ ಕಾರ್ಯನಿರ್ವಹಿಸಲು ನೈತಿಕ ಧೈರ್ಯ ತುಂಬಬೇಕೆಂದು ಮನವಿಯ ಮೂಲಕ ವಿನಂತಿಸಲಾಗಿದೆ.

Also Read  ಅಗ್ನಿಪತ್ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ

ಸುಬ್ರಹ್ಮಣ್ಯ ವಲಯದ ಐತ್ತೂರು ರಕ್ಷಿತಾರಣ್ಯದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ಮರಗಳ್ಳರೊಂದಿಗೆ ಶಾಮೀಲಾಗಿ ಕಡಿದು ಮಾರಾಟ ಮಾಡಿದ್ದಾರೆ ಎಂದು ಸ್ಥಳೀಯರು ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ನೇರವಾಗಿ ಆರೋಪಿಸಿ ದೂರು ಸಲ್ಲಿಸಿರುತ್ತಾರೆ, ದೂರಿನಲ್ಲಿ ಕಡಿದು ಹಾಕಲಾಗಿರುವ ಮರದ ದಿಮ್ಮಿಗಳು ಹಾಗೂ ಮರದ ಕುತ್ತಿ (ಬುಡ)ಗಳ ಜಿಪಿಎಸ್ ಫೋಟೋಗಳೊಂದಿಗೆ ಶಾಮೀಲಾಗಿದ್ದಾರೆ ಎನ್ನಲಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರುಗಳನ್ನು ಕೂಡ ಉಲ್ಲೇಖಿಸಿದ್ದಾರೆ. ಆದರೆ ಇಲಾಖೆಯು ಈ ಪ್ರಕರಣದ ತನಿಖೆಗೆ ನೇಮಿಸಿದ ಅಧಿಕಾರಿಯ ನಡೆಯೇ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಂಶಯಗಳು ಸೃಷ್ಟಿಯಾಗಿದೆ. ವಲಯ ಅರಣ್ಯಾಧಿಕಾರಿಯ ಮೇಲೆಯೇ ಮರಗಳ್ಳತನದಲ್ಲಿ ಶಾಮೀಲಾಗಿರುವ ಆರೋಪ ಇರುವಾಗ ಅದೇ ಸ್ತರದ ಅಧಿಕಾರಿಯಿಂದ ತನಿಖೆ ಮಾಡಿಸುತ್ತಿರುವುದು ಸಮಂಜಸವಲ್ಲ. ತನಿಖೆಗೆ ಬಂದಿದ್ದ ಅರಣ್ಯ ಸಂಚಾರ ದಳದವರು ಸ್ಥಳಕ್ಕೆ ಬರಲು ನಿಗದಿ ಮಾಡಿದ ದಿನದಂದು ಬಾರದೇ ಎರಡು ದಿನ ಬಿಟ್ಟು ಬಂದಿರುವುದು, ಬಂದ ದಿನವೂ ಬೆಳಗ್ಗೆ ಬರುವುದಾಗಿ ಹೇಳಿ ದೂರುದಾರರನ್ನು ಮಧ್ಯಾಹ್ನದ ತನಕ ರಸ್ತೆ ಬದಿಯಲ್ಲಿ ಕಾಯುವಂತೆ ಮಾಡಿ ತಡವಾಗಿ ಬಂದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ, ಆದುದರಿಂದ ತನಿಖಾಧಿಕಾರಿಯಾಗಿರುವ ಅರಣ್ಯ ಸಂಚಾರದಳದ ಪ್ರಭಾರ ಅಧಿಕಾರಿ ಸಂಧ್ಯಾ ಅವರ ಬದಲಾಗಿ ಇಲಾಖೆಯ ಪ್ರಾಮಾಣಿಕ, ವಿಶ್ವಾಸರ್ಹ ಉನ್ನತಾಧಿಕಾರಿಗಳನ್ನು ತನಿಖೆಗೆ ನೇಮಿಸಬೇಕೆಂದಿರುವುದು ನಮ್ಮ ಆಗ್ರಹವಾಗಿದೆ. ಸುಬ್ರಹ್ಮಣ್ಯ ವಲಯದ ವ್ಯಾಪ್ತಿಯಲ್ಲಿ ಮರಗಳ್ಳತನ ನಿರಂತರವಾಗಿ ನಡೆಯುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಈ ಎಲ್ಲ ವಿಚಾರಗಳನ್ನು ಶೀಘ್ರದಲ್ಲಿಯೇ ಮಾಧ್ಯಮಗಳು ಸಚಿತ್ರ ವರದಿಗಳೊಂದಿಗೆ ಹೊರ ಜಗತ್ತಿಗೆ ತಿಳಿಸಲಿವೆ, ಈ ವೇಳೆ ಅಧಿಕಾರಿಗಳು ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಪತ್ರಕರ್ತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ರೀತಿಯ ಹೋರಾಟವನ್ನು ನಡೆಸಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಗಿದೆ.

Also Read  ರಸ್ತೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು..!

error: Content is protected !!
Scroll to Top