(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 07. ದೇವಸ್ಥಾನ ಹಿಂದೂ ಭಾಂಧವರಿಗೆ, ಮಸೀದಿ ಮುಸ್ಲಿಂ ಸಮುದಾಯದವರಿಗೆ, ಚರ್ಚ್ ಕ್ರೈಸ್ತ ಧರ್ಮಿಯರಿಗೆ ಮಾತ್ರ ಸೀಮಿತವಾಗಿರುತ್ತದೆ, ಆದರೆ ಶಾಲೆ, ವಿದ್ಯಾ ಸಂಸ್ಥೆಗಳು ಎಲ್ಲಾ ಜಾತಿ, ಮತ, ಧರ್ಮದವರಿಗೂ ದೇಗುಲವಾಗಿರುತ್ತದೆ, ಈ ಹಿನ್ನೆಲೆಯಲ್ಲಿ ಇದರ ಮೂಲ ಸೌಕರ್ಯಗಳಿಗೆ ಕೊರತೆ ಆಗದಂತೆ ಅನುದಾನ ಹಂಚಿಕೆ ಮಾಡುವುದು ಜನ ಪ್ರತಿನಿಧಿಯ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಹೇಳಿದರು.
ಅವರು ಫೆ. 5ರಂದು ಗಂಡಿಬಾಗಿಲು ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3.50 ಲಕ್ಷ ರೂಪಾಯಿ ಅನುದಾನದಲ್ಲಿ ಶಾಲಾ ಸಭಾಂಗಣಕ್ಕೆ ಟೈಲ್ಸ್ ಅಳವಡಿಕೆ, ಶಾಲಾ ಮಾಡು ದುರಸ್ಥಿ ಸೇರಿದಂತೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಳಿಕ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಶಾಲಾ ಶಿಕ್ಷಣ ಸಂಯೋಜಕ ಮಹೇಶ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಬಹಳಷ್ಟು ಸೌಲಭ್ಯಗಳಿವೆ, ಅದರ ಉಪಯೋಗ ಪಡೆಯುವುದರ ಜೊತೆಗೆ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಆಗಾಗ್ಗೆ ಶಾಲೆಗೆ ಬಂದು ನೋಡುವ ಅಭ್ಯಾಸ ಮಾಡಿಕೊಳ್ಳಬೇಕು, ಆಗ ವಿದ್ಯಾರ್ಥಿಗಳಿಗೂ ಕಲಿಕೆಯಲ್ಲಿ ಇನ್ನಷ್ಟು ಆಸಕ್ತಿ ಮೂಡಿ ಬರುತ್ತದೆ ಎಂದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಾಬು ಅಗರಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಶೇಖರ್ ಅತ್ನಿ ಶಾಲೆಯ ಅಗತ್ಯತೆತೆಗೆ ಅನುಗುಣವಾಗಿ ಸಹಕಾರ ನೀಡಿದ ಧಾನಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ದಾನಿಗಳಿಗೆ ಸನ್ಮಾನ: ಶಾಲೆಯ ಬೇಡಿಕೆಗೆ ಅನುಗುಣವಾಗಿ ಸ್ಪಂಧಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ಸ್ಥಳೀಯ ದಾನಿಗಳಾದ ದೇವಿಪ್ರಸಾದ್ ನೀರಾಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಅಗರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಝೀರ್ ಪೂರಿಂಗ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಸ್ವಪ್ನ, ಸದಸ್ಯರಾದ ಇಸ್ಮಾಯಿಲ್, ಅಬ್ದುಲ್ ರಜಾಕ್, ಸಾಮಾಜಿಕ ಕರ‍್ಯಕರ್ತ ಹೆಚ್. ಆದಂ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ, ನಾಗರತ್ನ ಶಾಸ್ತಿ ವಂದಿಸಿದರು. ಪ್ರೇಮಲತಾ, ಚಿತ್ರಾವತಿ ಕರ‍್ಯಕ್ರಮ ನಿರೂಪಿಸಿದರು.