(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.07. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಂತರಿಕ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದರೂ ಕ್ರಿಮಿನಲ್ ಹಿನ್ನೆಲೆಯ ಕಾರಣದಿಂದ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಮುಹಮ್ಮದ್ ಹ್ಯಾರಿಸ್ ನಲಪಾಡ್ ಕೊನೆಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
64 ಸಾವಿರ ಮತಗಳನ್ನು ಗಳಿಸಿ ಗೆದ್ದರೂ ಅಧ್ಯಕ್ಷ ಸ್ಥಾನ ನೀಡದೆ 57 ಸಾವಿರ ಗಳಿಸಿ ಎರಡನೇ ಸ್ಥಾನ ಗಳಿಸಿದ್ದ ರಕ್ಷಾ ರಾಮಯ್ಯಗೆ ಮಣೆ ಹಾಕಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ನಿರ್ಧಾರವನ್ನು ವಾಪಾಸ್ ಪಡೆದಿರುವ ಎಐಸಿಸಿ, ನಲಪಾಡ್ ಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ಸಮ್ಮತಿ ಸೂಚಿಸಿದೆ. ರಾಜ್ಯದಲ್ಲಿನ ಎಲ್ಲಾ ಬೆಳವಣಿಗೆಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರ ಗಮನಕ್ಕೆ ತಂದು ಅತಿ ಹೆಚ್ಚು ಮತಗಳನ್ನು ಪಡೆದ ನಲಪಾಡ್ ಅವರನ್ನೇ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಿಸಲು ಒತ್ತಡ ಹೇರಿದ್ದರು. ಕ್ರಿಮಿನಲ್ ಹಿನ್ನಲೆಯ ಕಾರಣಕ್ಕೆ ನಲಪಾಡ್ ಫಲಿತಾಂಶವನ್ನು ತಡೆಹಿಡಿಯಲಾಗಿತ್ತಾದರೂ, ಇದೀಗ ನೂತನ ಅಧ್ಯಕ್ಷರಾಗಿ ನಲಪಾಡ್ ಆಯ್ಕೆಯಾಗಿದ್ದಾರೆ.