(ನ್ಯೂಸ್ ಕಡಬ) newskadaba.com ಸುಳ್ಯ, ಫೆ.07. ತುಳುನಾಡಿನಲ್ಲಿ ತುಳು ಲಿಪಿಯ ಬೆಳವಣಿಗೆ ಭಾರಿ ಹುಮ್ಮಸ್ಸಿನಿಂದ ನಡೆಯುತ್ತಿದ್ದು, ಬಾಳಿಲದ ದೈವಶಕ್ತಿ ಯುವ ಸಂಘದ ವತಿಯಿಂದ ಸುಳ್ಯ ತಾಲೂಕಿನ ಬಾಳಿಲದಲ್ಲಿ ತುಳು ಲಿಪಿಯ ನಾಮಫಲಕವನ್ನು ಶನಿವಾರದಂದು ಅನಾವರಣಗೊಳಿಸಲಾಯಿತು.
ತುಳು ನಾಮ ಫಲಕವನ್ನು ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ (ರಿ.) ಅಯ್ಯನಕಟ್ಟೆ ಇದರ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಗೌಡ ಬೇರಿಕೆ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಳು ಲಿಪಿ ಶಿಕ್ಷಕರು ಹಾಗೂ ಜೈ ತುಳುನಾಡ್ (ರಿ.) ಇದರ ಉಪ ಸಂಘಟನಾ ಕಾರ್ಯದರ್ಶಿ ಶ್ರೀ ಜಗದೀಶ ಗೌಡ ಕಲ್ಕಳ ಮಾತನಾಡಿ, ತುಳು ಲಿಪಿ ಬೆಳವಣಿಗೆಗೆ ತುಳುನಾಡಿನ ಅಲ್ಲಲ್ಲಿ ಕೆಲಸ ಕಾರ್ಯ ನಡೆಯುತ್ತಿದೆ, ಹಾಗೆಯೇ ನಮ್ಮ ಊರಿನಲ್ಲಿ 2 ನೇ ತುಳು ಲಿಪಿಯ ನಾಮಫಲಕ ಹಾಕುವ ಕಾರ್ಯ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲೂ ತುಳು ಲಿಪಿಯ ಹೆಸರು ಹಾಕಬೇಕು. ತುಳು ಲಿಪಿ ಮತ್ತು ತುಳು ಭಾಷೆಯನ್ನು ತುಳುವರಾದ ನಾವೇ ಉಳಿಸಬೇಕು ಎಂದರು.
ಅತಿಥಿಗಳಾಗಿ ಹಿರಿಯ ದೈವ ನರ್ತಕರಾದ ಬಾಬು ಅಜಲ, ಸುದ್ದಿ ಬಿಡುಗಡೆ ವಾರ ಪತ್ರಿಕೆಯ ವರದಿಗಾರರಾದ ಈಶ್ವರ ವಾರಣಾಸಿ ಉಪಸ್ಥಿತರಿದ್ದರು. ದೈವಶಕ್ತಿ ಯುವ ಸಂಘದ ಅಧ್ಯಕ್ಷ ಜಯರಾಮ ಅಜಲ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪುರುಷೋತ್ತಮ ಮುಪ್ಪೇರ್ಯ, ಬಾಬು ಮರುವಂಜ, ಜಲಜಾಕ್ಷಿ ಬಾಳಿಲ, ನಾಗೇಶ್ ಬಾಳಿಲ, ನವೀನ್ ಬಾಳಿಲ, ದಯಾನಂದ ಗೌಡ ಮೊದಲಾದವರು ಉಪಸ್ಥಿತರಿದ್ದರು.