(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 07. 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ. ಜೆ. ರೂಪಾ ತಿಳಿಸಿದರು.
ಅವರು ಫೆಬ್ರವರಿ 5 ರಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ 41ನೇ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಉದ್ಯೋಗ ಹಾಗೂ ಪ್ರಕ್ರಿಯೆಗಳಲ್ಲಿ 14ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು 18 ವರ್ಷದೊಳಗಿನವರಿಗೆ ಅಪಾಯಕಾರಿ ಉದ್ಯಮಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದ್ದು, ಇದನ್ನು ಉಲ್ಲಂಘಿಸಿದವರಿಗೆ 6 ತಿಂಗಳಿನಿಂದ 2 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಿಂದ 50 ಸಾವಿರ ದಂಡ ವಿಧಿಸಲಾಗುವುದು ಎಂದರು. ಬಾಲಕಾರ್ಮಿಕರ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಬೀದಿನಾಟಕ ಹಾಗೂ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದರು. ಪ್ರಸ್ತುತ ಸಾಲಿನ ಒಟ್ಟು 305 ಕ್ಕೂ ಹೆಚ್ಚು ಸಂಸ್ಥೆಗಳನ್ನು ಈಗಾಗಲೇ ತಪಾಸಣೆ ನಡೆಸಿದ್ದು, ಯಾವುದೇ ಬಾಲಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿರುವ ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿಲ್ಲ ಎಂದರು. ಮಕ್ಕಳು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ರೈಲ್ವೆ ನಿಲ್ದಾಣ, ಬಸ್‍ಸ್ಟಾಂಡ್ ಗಳಲ್ಲಿ ವ್ಯಸನಿಗಳು ಕಂಡುಬಂದಲ್ಲಿ ಅಂತವರನ್ನು ಬಾಲಕಾರ್ಮಿಕ ಪುನರ್ವಸತಿ ಕೇಂದ್ರದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಅವರುಗಳಿಗೆ ಶಿಕ್ಷಣವಂತರಾಗುವಂತೆ ಪ್ರೋತ್ಸಾಹಿಸಬೇಕು ಎಂದರು.
ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಬಾಲಕಾರ್ಮಿಕರನ್ನು ಹೆಚ್ಚಾಗಿ ಕೆಲಸಕ್ಕೆ ನೇಮಿಸಿಕೊಳ್ಳುವ ಸ್ಥಳಗಳಾದ ಅಪಾರ್ಟ್ ಮೆಂಟ್, ಕಲ್ಲುಕೋರೆ, ಕಾರ್ಖಾನೆಗಳು, ಮರಳು ಸಾಗಿಸುವ ಪ್ರದೇಶಗಳು ಹಾಗೂ ಬಂದರು ಮುಂತಾದ ಪ್ರದೇಶಗಳಿಗೆ ಅನಿರೀಕ್ಷಿತವಾಗಿ ಭೇಟಿ ಮಾಡಿ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು. ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಅಧಿಕಾರಿ ಕೆ.ಬಿ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಬಾಲಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ-2016ರ ಬಗ್ಗೆ ಸಾರ್ವಜನಿಕರಲ್ಲಿ ಬಾಲ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸುವುದರ ಬಗ್ಗೆ ಜಾಗೃತಿ ಮೂಡಿಸಲು ತರಬೇತಿ ಕಾರ್ಯಗಾರ, ಜನ ಜಾಗೃತಿ ರಥದಂತಹಾ ಕಾರ್ಯಕ್ರಮಗಳನ್ನು ಆಯೋಜಿಸಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಎರಡು ದಿನಗಳವರೆಗೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು ಎಂದರು. ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ವಿಲ್ಮಾ ಎಲಿಜಬೇತ್ ಹಾಗೂ ಕಾರ್ಮಿಕ ಇಲಾಖೆಯ ವಿವಿಧ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.