(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಫೆ. 06. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಾಳ್ತಿಲ-ಕನ್ವಾರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವ ಗುರುವಾರದಂದು ಜರುಗಿತು. ಬುಧವಾರ ಬೆಳಗ್ಗೆ ಸಾರಿಮಂಟಮೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬಾಳ್ತಿಲ ಚಾವಡಿಯಿಂದ ಶ್ರೀ ರಾಜನ್ ದೈವದ ಭಂಡಾರ ಹಿಡಿದು ಕನ್ವಾರೆಗೆ ಬರಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಂದ ವಿವಿಧ ವಿನೋದಾವಳಿಗಳು, ಬಾಲಕೃಷ್ಣ ಶಾಂತಿಗುರಿ ಪ್ರಾಯೋಜಕತ್ವದಲ್ಲಿ ಉಪ್ಪಿನಂಗಡಿಯ ಆನಂದ ಮತ್ತು ಬಳಗದ ಬೀಟ್ ವಾರಿಯರ್ಸ್ ಡಾನ್ಸ್ ತಂಡದಿಂದ ನೃತ್ಯ ವೈಭವ ನಡೆಯಿತು.
ಗುರುವಾರ ಬೆಳಗ್ಗೆ ಶ್ರೀ ರಾಜನ್ ದೈವ ಹಾಗೂ ಗುಳಿಗ ದೈವದ ನೇಮೋತ್ಸವ ನಡೆದು ಅಂದಪಾದೆ ಎಂಬಲ್ಲಿಗೆ ಮಾರಿ ಹೋಗಿ ನೇಮ ಸಂಪನ್ನಗೊಂಡಿತು. ಸೋಮಶೇಖರ ಕಲ್ಲುಗುಡ್ಡೆ, ಧರ್ಣಪ್ಪ ಕಲ್ಲುಗುಡ್ಡೆ ದೈವದ ನರ್ತನ ಸೇವೆ ನೆರವೇರಿಸಿದರು. ಧರ್ಣಪ್ಪ ಗೌಡ ಅವರು ದೈವದ ಪರಿಚಾರಕರಾಗಿ ಕಾರ್ಯನಿರ್ವಹಿಸಿದರು. ದೈವಸ್ಥಾನದ ಸಮಿತಿಯವರು, ಊರ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಕಡಬ ದಿನೇಶ್ ರೈ ಹಾಗೂ ನೂಜಿಬಾಳ್ತಿಲದ ಯುವ ಸಾಹಿತಿ ಸಮ್ಯಕ್ತ್ ಎಚ್.ಜೈನ್ ಅವರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.