ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು – ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 06. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್ ಪ್ರದೇಶದ ಹೇಮಾವತಿ ನಗರದಲ್ಲಿ ಬಿಟ್ಟು ಹೋದ ಒಳಚರಂಡಿ ಕಾಮಗಾರಿಯನ್ನು ಕೈಗೊಳ್ಳುವ ಸಲುವಾಗಿ ಬಜಾಲ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿದ್ದು, ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಮಾರ್ಪಾಡು ಮಾಡಬೇಕಾದ ಅವಶ್ಯಕತೆ ಇರುವುದರಿಂದ ಕಾಮಗಾರಿ ಮುಕ್ತಾಯದ ವರೆಗೆ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳು 1989ರ ನಿಯಮ 221 ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಜಾಲ್ ರಸ್ತೆಯಲ್ಲಿ ಫೆಬ್ರವರಿ 5 ರಿಂದ 12 ರವರೆಗೆ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿ ಪೊಲೀಸ್ ಆಯುಕ್ತರು ಹಾಗೂ ಮಂಗಳೂರು ನಗರದ ಅಡಿಷನಲ್ ಡಿಸ್ಟ್ರೀಕ್ಟ್ ಮೆಜಿಸ್ಟ್ರೇಟ್  ಶಶಿಕುಮಾರ್ ಎನ್, ಆದೇಶಿಸಿದ್ದಾರೆ.

ಜಪ್ಪಿನಮೊಗರಿನಿಂದ ಬಜಾಲ್ ಮಾರ್ಗವಾಗಿ ಪಡೀಲ್ ಹಾಗೂ ಜಲ್ಲಿಗುಡ್ಡೆ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಪಂಪ್‍ ವೆಲ್ ಮಾರ್ಗವಾಗಿ ಪಡೀಲ್-ಬಜಾಲ್ ಕ್ರಾಸ್‍ ಗೆ ಬಂದು ಅಲ್ಲಿಂದ ಮುಂದೆ ಸಂಚರಿಸಲಿದೆ. ಪಡೀಲ್, ಜಲ್ಲಿಗುಡ್ಡೆ ಕಡೆಯಿಂದ ಬಜಾಲ್ ರಸ್ತೆ ಮಾರ್ಗವಾಗಿ ಜಪ್ಪಿನಮೊಗರಿಗೆ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಪ್‍ ವೆಲ್ ಮಾರ್ಗವಾಗಿ ಜಪ್ಪಿನ ಮೊಗರುವಿಗೆ ಬಂದು ಅಲ್ಲಿಂದ ಮುಂದಕ್ಕೆ ಚಲಿಸುತ್ತದೆ. ನಿರ್ಬಂಧನೆ ಹೊಂದಿರುವ ಈ ರಸ್ತೆಯ ಮೂಲಕ ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಸಂಚರಿಸುವ ಅವಕಾಶವಿದೆ.

error: Content is protected !!

Join the Group

Join WhatsApp Group