ಯುವ ಜನರಿಗೆ ಕೌಶಲ್ಯಭಿವೃದ್ಧಿ ತರಬೇತಿಗಳನ್ನು ನೀಡಲು ಒತ್ತು ನೀಡಬೇಕು ➤ ಅಪರ ಜಿಲ್ಲಾಧಿಕಾರಿ ಎಮ್. ಜೆ. ರೂಪ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 06. ಯುವ ಜನರ ಜೀವನೋಪಾಯಕ್ಕೆ ದಾರಿಯಾಗುವ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ಯುವ ಕೇಂದ್ರವು ನೀಡುವುದರೊಂದಿಗೆ ಅವರುಗಳು ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿಗಳನ್ನಾಗಿಸಲು ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಮ್. ಜೆ. ರೂಪಾ ತಿಳಿಸಿದರು. ಅವರು ಜಿಲ್ಲಾಧಿಕಾರಿಯವರ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕ್ರೀಡಾ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ  ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ನೆಹರು ಯುವ ಕೇಂದ್ರವು ಯುವಜನರಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸುವುದು ಸೇರಿದಂತೆ ಕಲೆ, ಸಂಸ್ಕೃತಿಗಳನ್ನು ಬೆಳೆಸಿ ಅವರನ್ನು  ಶಿಕ್ಷಣವಂತರನ್ನಾಗಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವುದರೊಂದಿಗೆ ಸದೃಢ ಭಾರತ ನಿರ್ಮಾಣಕ್ಕೆ  ಕೈ ಜೋಡಿಸಬೇಕು ಎಂದರು. ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಾಗಿ ಕೌಶಲ್ಯಭಿವೃದ್ಧಿ ತರಬೇತಿಗಳನ್ನು ನೀಡುವಲ್ಲಿ ಯುವ ಕೇಂದ್ರವು ಪ್ರಾಶಸ್ತ್ಯ ನೀಡಬೇಕು ಎಂದ ಅವರು ಗ್ರಾಮೀಣ ಭಾಗದ ಮಹಿಳೆಯರ ತರಬೇತಿಗೆ ಆಧ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.

Also Read  ಮರಣೋತ್ತರ ಪರೀಕ್ಷೆ ಮುಕ್ತಾಯ - ರಾತ್ರಿ 11 ಗಂಟೆಗೆ ಬೆಂಗಳೂರು ತಲುಪಲಿರುವ ಸ್ಪಂದನಾ ಮೃತದೇಹ..!

ಜಿಲ್ಲೆಯಲ್ಲಿರುವ ಹಿಂದುಳಿದ ಗ್ರಾಮಗಳು ಅಥವಾ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಯುವ ಸಮನ್ವಯಧಿಕಾರಿ ರಘುವೀರ್ ಸೂಟರ್ ಪೇಟೆ ಮಾತನಾಡಿ, ಯುವಕರ ದೃಷ್ಟಿಕೋನದಿಂದ ಹಲವು ತರಬೇತಿ ಕಾರ್ಯಗಳನ್ನು ನೆಹರು ಯುವ ಕೇಂದ್ರದಿಂದ ಸಿದ್ಧಪಡಿಸಿದ್ದು, ಯುವ ಜನರಿಗೆ ಸದುಪಯೋಗವಾಗುವ ರೀತಿಯಲ್ಲಿ ನೆಹರು ಯುವ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದರು.

ಆತ್ಮ ನಿರ್ಭರ ಭಾರತ ಯೊಜನೆಯಡಿಯಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದು, ಯುವಜನರಿಗೆ ಅನುಕೂಲ ಮಾಡಲು ವೈಯಕ್ತಿಕ ಸಂಪರ್ಕ ಮತ್ತು ಸೌಲಭ್ಯ ಪ್ರಚಾರ, ಶಿಕ್ಷಣ, ಡಿಜಿಟಲ್ ಸೇವೆಗಳು, ವೃತ್ತಿ ಮಾರ್ಗದರ್ಶನ ಹಾಗೂ ಇತ್ತೀಚಿನ ಕೋವಿಡ್-19 ಮಹಾಮಾರಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸಿದ್ದೇವೆ ಎಂದರು.
ಯುವಜನರ ಜೀವನ ಶೈಲಿಗೆ ಉಪಯೋಗವಾಗುವ ಕಲೆ ಮತ್ತು ಸಂಸ್ಕೃತಿಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದರು. ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ, ಕೌಶಲ್ಯಭಿವೃದ್ಧಿ ಇಲಾಖೆಯ ನೋಡಲ್ ಅಧಿಕಾರಿ ತಾರನಾಥ್,  ಜಿಲ್ಲಾ ಅಗ್ರನಿ ಬ್ಯಾಂಕ್‍ನ ವ್ಯವಸ್ಥಾಪಕ ಪ್ರವೀಣ್, ಎನ್‍ಸಿಸಿ ನೋಡಲ್ ಅಧಿಕಾರಿ ಲೆಪ್ಟಿನೆಂಟ್ ಕಲೋನೆಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Also Read  ?? ಬಂಗಾರ್ ಪಲ್ಕೆ ಜಲಪಾತ ದುರಂತ ಪ್ರಕರಣ ➤ 23 ದಿನಗಳ ಸತತ ಕಾರ್ಯಾಚರಣೆಯಿಂದ ಮೃತದೇಹ ಪತ್ತೆ..!

error: Content is protected !!
Scroll to Top