ಮಂಗಳೂರು: ‘ಆಟೋ ರಾಜಾಕನ್ಮಾರ್’ ವತಿಯಿಂದ ತೈಲ ಬೆಲೆಯೇರಿಕೆ ಖಂಡಿಸಿ ರಿಕ್ಷಾ ಚಲೋ

(ನ್ಯೂಸ್ ಕಡಬ) newskadaba.com ಕೊಣಾಜೆ, ಫೆ. 05. ಪೆಟ್ರೋಲ್, ಡಿಸೇಲ್ ಹಾಗೂ ಎಲ್.ಪಿಜಿ ದರ ವಿಪರೀತ ಏರಿಕೆಯಾದುದನ್ನು ಖಂಡಿಸಿ ‘ಆಟೋ ರಾಜಾಕನ್ಮಾರ್’ ಸಂಘಟನೆಯ ಆಶ್ರಯದಲ್ಲಿ ಶುಕ್ರವಾರದಂದು ಅಟೋ ರಿಕ್ಷಾ ಚಾಲಕರು ದೇರಳಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿದರು.

ಡಿವೈಎಫ್.ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ತೈಲ ಬೆಲೆ ಏರಿಕೆಯಾದರೆ ರಿಕ್ಷಾ ಚಾಲಕರಿಗೆ ಮಾತ್ರವಲ್ಲ, ಪ್ರತೀಯೊಂದರ ಮೇಲೂ ದರ ಏರಿಕೆಯ ಬಿಸಿ ತಟ್ಟುತ್ತದೆ. ಹಲವರ ದುಡಿಯುವ ಹಕ್ಕುಗಳನ್ನು ಕೇಂದ್ರ ಸರಕಾರ ಕಸಿದುಕೊಳ್ಳುತ್ತಿದೆ. ಬಡವರಿಂದ ಕಸಿದುಕೊಂಡು ಅಂಬಾನಿ, ಅದಾನಿಯಂತವರ ಜೇಬು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಆಟೋ ರಾಜಕನ್ಮಾರ್ ಸಂಘಟನೆಯ ಅಬ್ದುಲ್ ಜಲೀಲ್ ಪ್ರಾಸ್ತಾವಿಕ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದ ತೈಲ ದರ ಪಾತಾಳಕ್ಕೆ ಇಳಿದರೂ ಇಲ್ಲಿ ಮಾತ್ರ ಏರಿಕೆಯಾಗುತ್ತಲೇ ಇದ್ದು, ಶ್ರೀಮಂತರಿಂದ ಬೇಕಾದರೆ ಕಸಿದುಕೊಳ್ಳಿ. ಆದರೆ ಬಡ ಜನರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಬೇಡಿ. ಇವತ್ತು ನಾವು ದೇರಳಕಟ್ಟೆಯವರೆಗೆ ರಿಕ್ಷಾ ಚಲೋ ಮಾಡಿದ್ದೇವೆ. ಮುಂದೊಂದು ದಿನ ದೆಹಲಿಯ ಪ್ರಧಾನಿ ಕಚೇರಿಗೂ ರಿಕ್ಷಾ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಸೇಸಪ್ಪ ಬೆದ್ರಕಾಡು, ಸಿ.ಎಂ.ರವೂಫ್, ಅರುಣ್ ಕುಮಾರ್, ರಫೀಕ್ ಹರೇಕಳ, ಮೋನು ಟಿಸ್ಕೋ, ಇಸ್ಮತ್ ಪಜೀರ್ ಮೊದಲಾದವರು ಉಪಸ್ಥಿತರಿದ್ದರು.

Also Read  ಮಂಗಳೂರು: ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಐದು ವರ್ಷದ ಮಗು ಮೃತ್ಯು

error: Content is protected !!
Scroll to Top