(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 05. ಗುರುವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣದಾದ್ಯಂತ ಪುತ್ತೂರು ಮೂಲದ ಯುವಕ ಅಬುಧಾಬಿಯಲ್ಲಿ ಉದ್ಯೋಗದಲ್ಲಿರುವ ಸಫ್ವಾನ್ ಎಂಬ ಯುವಕನಿಗೆ 7 ಕೋಟಿ ರೂಪಾಯಿ ಲಾಟರಿ ವಿಜೇತಗೊಂಡಿದೆ ಎಂಬ ಸುದ್ದಿಯ ಫೋಟೋವೊಂದು ವ್ಯಾಪಕವಾಗಿ ವೈರಲ್ ಆಗಿತ್ತು. ಅಬುಧಾಬಿ ಡ್ಯೂಟಿ ಫ್ರೀ ಲಾಟರಿಯಲ್ಲಿ 7 ಕೋಟಿ ರೂ. ಗಳ ಲಾಟರಿ ಲಭಿಸಿದೆ ಎಂದು ಹೇಳುವ ಪೋರ್ಟಲ್ ನ್ಯೂಸ್ ಒಂದರ ಸ್ಕ್ರೀನ್ ಶಾಟ್ ನೊಂದಿಗೆ ಇದು ಸಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಇದರ ಹಿನ್ನೆಲೆಯಲ್ಲಿ ಸದ್ರಿ ವ್ಯಕ್ತಿಗೆ ನಿನ್ನೆ ರಾತ್ರಿಯಿಂದ ನಿರಂತರ ಕರೆಗಳು ಮತ್ತು ಮೆಸೇಜ್ ಗಳೂ ಬರಲಾರಂಭಿಸಿದವು. ಸತ್ಯಾಸತ್ಯತೆ ತಿಳಿಯದೆ ಬಹಳಷ್ಟು ಮಂದಿ ಇದನ್ನು ಬೇರೆ ಬೇರೆ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿಯ ಜಾಡು ಹಿಡಿದು ಹೋದ ನ್ಯೂಸ್ ಕಡಬ ತಂಡಕ್ಕೆ ಅಚ್ಚರಿಯೊಂದು ಕಾದಿತ್ತು. ಕೇರಳ ಮೂಲದ ಒಬ್ಬ ವ್ಯಕ್ತಿಗೆ ದೊರೆತ ಲಾಟರಿಯ ಬಗ್ಗೆ ಇದ್ದ ನ್ಯೂಸ್ ಒಂದನ್ನು ತಿರುಚಿ, ಫೋಟೋಶಾಪ್ ಮೂಲಕ ಎಡಿಟ್ ಮಾಡಿ ಸಫ್ವಾನ್ ಎಂಬ ಪುತ್ತೂರಿನ ಯುವಕ ಹೆಸರಿನಲ್ಲಿ ಹರಿಬಿಡಲಾಗಿದೆ ಎಂಬ ನೈಜತೆ ತಡವಾಗಿ ತಿಳಿದುಬಂದಿದೆ. ವಾಟ್ಸಪ್ ಗ್ರೂಪ್ ಒಂದರಲ್ಲಿ ಈ ಯುವಕನ ಆತ್ಮೀಯರು ತಮಾಷೆಗಾಗಿ ಮಾಡಿದ ಈ ಅವಾಂತರ ವ್ಯಾಪಕವಾಗಿ ವೈರಲ್ ಆಗಿದೆ.
ಈಗಾಗಲೇ ಹಲವಾರು ಮಂದಿ ಈ ಯುವಕನನ್ನು ಮೆಸೇಜ್ ಮತ್ತು ಕರೆಗಳ ಮುಖಾಂತರ ಸಂಪರ್ಕಿಸಿದ್ದು, ವಾಸ್ತವ ತಿಳಿದು ನಿಬ್ಬೆರಗಾಗಿದ್ದಾರೆ. ತಮಾಷೆಗಾಗಿ ಸೀಮಿತ ಗ್ರೂಪ್ ನಲ್ಲಿ ನಡೆದ ಆಟವೊಂದು ಯುವಕನೊಬ್ಬನನ್ನು ಒಂದೇ ದಿನದಲ್ಲಿ ‘ಕೋಟ್ಯಾಧಿಪತಿ’ಯನ್ನಾಗಿ ಬಿಂಬಿಸಿರುವ ಪರಿಯಂತೂ ಈಗ ಜನರೆಡೆಯಲ್ಲಿ ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನ್ಯೂಸ್ ಕಡಬ ತಂಡವು ಸಫ್ವಾನ್ ಎಂಬ ಯುವಕನನ್ನು ಸಂಪರ್ಕಿಸಿದ್ದು, ಲಾಟರಿ ವಿಜೇತದ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.