ತ್ಯಾಜ್ಯ ಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರದಲ್ಲೇ ಮಧ್ಯಂತರ ಪರಿಹಾರ ➤ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 04. ಪಚ್ಚನಾಡಿ ಘನತ್ಯಾಜ್ಯ ಲ್ಯಾಂಡ್‍ ಫಿಲ್ ಘಟಕದ ತ್ಯಾಜ್ಯ ಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ ತಿಳಿಸಿದರು.

 


ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಪಚ್ಚನಾಡಿ ಘನತ್ಯಾಜ್ಯ ಲ್ಯಾಂಡ್‍ ಫಿಲ್ ಘಟಕದ ತ್ಯಾಜ್ಯ ಕುಸಿತದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತ ಸಭೆಯಲ್ಲಿ ಚರ್ಚಿಸಿ ಮಾತನಾಡುತ್ತಿದ್ದರು. ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನ ತ್ಯಾಜ್ಯ, ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತದಿಂದ ಸಂತ್ರಸ್ಥರು ತಮಗಾದ ನಷ್ಟದ ಬಗ್ಗೆ ಪರಿಹಾರದ ಕುರಿತು ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಪರಿಶೀಲಿಸಿ, ಮಧ್ಯಂತರ ಪರಿಹಾರವನ್ನು ಆದಷ್ಟು ಬೇಗ ನೀಡಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಚ್ಚನಾಡಿ ಘನತ್ಯಾಜ್ಯ ಲ್ಯಾಂಡ್‍ ಫಿಲ್ ಘಟಕದ ತ್ಯಾಜ್ಯ ಕುಸಿತದಿಂದ ಪರಿಹಾರ ಕೋರಿದ ಅರ್ಜಿಯಲ್ಲಿ ತಮ್ಮ ಬೆಳೆಗಾದ ನಷ್ಟ, ಮರಗಳಿಗಾದ ನಷ್ಟ, ಮನೆಹಾನಿ, ಜಮೀನು ಮುಚ್ಚಿ ಹೋಗಿರುವುದರಿಂದ ಆದ ನಷ್ಟ ಅಲ್ಲದೇ ಮತ್ತಿತರ ಯಾವುದೇ ರೀತಿಯ ನಷ್ಟದ ಬಗ್ಗೆ ನಿಖರವಾಗಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಾಗ ಮಹಾನಗರ ಪಾಲಿಕೆ ಪರಿಹಾರವನ್ನು ಅವುಗಳ ಆಧಾರದ ಮೇಲೆ ನೀಡಲು ಅನುಕೂಲವಾಗುತ್ತದೆ ಎಂದರು.

Also Read  ಮೀನುಗಾರಿಕೆಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ

 


ಅನಾಹುತದಿಂದ ಕೆಲವು ರಸ್ತೆಗಳು, ಕುಡಿಯುವ ನೀರಿನ ಬಾವಿಗಳು  ಹಾಗೂ ವಸತಿ ಸಮುಚ್ಛಯಗಳು ಮುಚ್ಚಿಹೋಗಿ ಸ್ಥಳೀಯ ನಾಗರೀಕರಿಗೆ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳನ್ನು ಆಲಿಸಿ ಮಾತನಾಡಿ, ಅಲ್ಲಿನ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುಚ್ಛಕ್ತಿ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಮಾಡಿಕೊಡಬೇಕೆಂದು ಸೂಚಿಸಿದರು. ಸಭೆಯಲ್ಲಿ ನೊಂದ ಸಂತ್ರಸ್ತರು ತಮಗಾಗಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿ, ಅವುಗಳನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಕಾರ್ಯದರ್ಶಿ ಎ.ಜಿ ಶಿಲ್ಪಾ , ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಎಮ್. ಜೆ. ರೂಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Also Read  ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ - ತಪ್ಪಿದ ದುರಂತ

error: Content is protected !!
Scroll to Top