(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಫೆ. 03. ಸಾಧನೆ ಮಾಡಿದ ಸಂದರ್ಭದಲ್ಲಿ ಪ್ರಶಸ್ತಿಗಳು, ಗೌರವಗಳು ಸಿಗುವುದು ಸಂತಸದಾಯಕ. ಆದರೆ ಸಾಧಕನಿಗೆ ತನ್ನ ಹುಟ್ಟೂರಿನಲ್ಲಿ ದೊರೆಯುವ ಸಣ್ಣ ಗೌರವ, ಸಮ್ಮಾನವೂ ಅತ್ಯಂತ ದೊಡ್ಡ ಅಭಿನಂದನೆ ಹಾಗೂ ಸ್ಪೂರ್ತಿದಾಯಕ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಹೇಳಿದರು. ಕಲ್ಲುಗುಡ್ಡೆ ಜೆ.ಜೆ.ಅಡಿಟೋರಿಯಂನಲ್ಲಿ ಶನಿವಾರ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮಸ್ಥರ ಪರವಾಗಿ ತ್ರಿಭಾಷಾ ಕವಿ ನೂಜಿಬಾಳ್ತಿಲ ದಿಲೀಪ್ ವೇದಿಕ್ ಅವರ ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಧಕನಿಗೆ ಎಷ್ಟೇ ದೊಡ್ಡ ಸಮಾರಂಭದಲ್ಲಿ ಗೌರವಗಳನ್ನು ನೀಡಿದರೂ, ಹುಟ್ಟೂರಿನಲ್ಲಿ ಅಭಿನಂದನೆ ಲಭಿಸಿಲ್ಲವೆಂದದರೆ, ಆತನಿಗೆ ಆ ಕೊರಗು ಇರುತ್ತದೆ. ಕವಿ, ಸಾಹಿತಿಯ ಕಲ್ಪನೆಗಳಿಗೆ ಅತೀವ ಶಕ್ತಿ ಇರುತ್ತದೆ. ಬರಹಗಾರನಿಗೆ ಆಳವಾದ ಅಧ್ಯಯನ ಅಗತ್ಯ. ಸತ್ವಯುತ ಸಾಹಿತ್ಯ ರಚಿಸಲು ಇಂದಿನ ಸಾಹಿತಿಗಳು ಮುಂದಾಗಬೇಕು ಎಂದರು. ಚಂದನ ಸಾಹಿತ್ಯ ವೇದಿಕೆ ಸ್ಥಾಪಕಾಧ್ಯಕ್ಷ ಹೆಚ್.ಭೀಮರಾವ್ ವಾಷ್ಕರ್ ಅಭಿನಂದನೆ ಸಲ್ಲಿಸಿ ಮಾತನಾಡಿ, ಹೆತ್ತವರ, ಪ್ರೋತ್ಸಾಹಗಾರರ ಸಹಕಾರವಿದ್ದಲ್ಲಿ ಸಾಧನೆಗೆ ಅಡ್ಡಿಯಿಲ್ಲ ಎಂಬ ಮಾತನ್ನು ದಿಲೀಪ್ ವೇದಿಕ್ ಹಾಗೂ ಇತರರು ಮಾಡಿ ತೋರಿಸಿದ್ದಾರೆ. ಬರಹಗಾರನಿಗೆ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಆಗುವ ಸಂತಸ ಅತೀವ. ಸಾಧಕ ಸಾಧನೆ ಮಾಡಿದ ಸಂದರ್ಭದಲ್ಲಿ ಬೀಗುವ ಬದಲು ಭಾಗಿ ಮುಂದುವರಿಯಬೇಕು ಎಂದರು. ಅಭಿನಂದನಾ ಕಾರ್ಯಕ್ರಮದಲ್ಲಿ ತ್ರೀಭಾಷಾ ಕವಿ, ಯುವ ಸಾಹಿತಿ ದಿಲೀಪ್ ವೇದಿಕ್, ಸಮ್ಯಕ್ತ್ ಹೆಚ್., ರಂಜನ್ ಪಿ.ಬಿ., ಭುವನ ಅವರನ್ನು ಅತಿಥಿಗಳು ಶಾಲು ಹೊದಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಿ, ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಸಮ್ಮಾನಿತರ ಪೋಷಕರು ಜತೆಗಿದ್ದರು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೂಜಿಬಾಳ್ತಿಲದ ದಿಲೀಪ್ ವೇದಿಕ್ ಕಡಬ ಅವರ ಹೊತ್ತ ಹತ್ತು ಮುತ್ತುಗಳು ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಸಾಸ್ತಾನದ ನೀರವ್ ಸಂಕೇತ್ ಸ್ವಾಮೀಜಿ, ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯ ಸಂಚಾಲಕ ಫಾ.ರೋನಾಲ್ಡ್ ಲೋಬೋ, ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಸತ್ಯಶಾಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಶಾಂತಾ ಕುಂಟಿನಿ, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಸುಳ್ಯ ಕ್ಷೇತ್ರ ಎಎಪಿ ಸಂಚಾಲಕ ಅಶೋಕ್ ಎಡಮಲೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಪಿಡಿಒ ಆನಂದ ಎ., ನೂಜಿಬಾಳ್ತಿಲ ಬೆಥನಿ ಪ್ರಾಂಶುಪಾಲ ಜಾರ್ಜ್ ಟಿ.ಎಸ್.,ಅಭಿನಂದನಾ ಸಮಿತಿ ಅಧ್ಯಕ್ಷ ಶಶಿಧರ ಇತ್ರಾಡಿ, ಕೋಶಾಧಿಕಾರಿ ಸ್ಯಾಮುವೆಲ್ ಜೋಸ್ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಕಛೇರಿ ಎಫ್‍ಡಿಎ ಗೋಪಾಲ ಕೆ. ಪ್ರಸ್ತಾವನೆಗೈದರು. ಅಭಿನಂದನಾ ಸಮಿತಿ ಕಾರ್ಯದರ್ಶಿ, ಯೋಹನ್ನಾನ್ ಓ.ಎಂ., ಸ್ವಾಗತಿಸಿ, ಕುಸುಮಾಧರ ವಂದಿಸಿದರು. ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
.