ಪುತ್ತೂರು: ಗೃಹರಕ್ಷಕದಳ ಘಟಕದ ನೂತನ ಕಛೇರಿ ಉದ್ಘಾಟನೆ ➤ ನಿಮ್ಮೊಂದಿಗೆ ನಾವಿದ್ದೇವೆ- ಸಂಜೀವ ಮಠಂದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 01. ಮಂಗಳೂರಿನಲ್ಲಿ ಸ್ವಂತ ಕಟ್ಟಡ ಹೊಂದಿರುವ ಜಿಲ್ಲಾ ಗೃಹರಕ್ಷಕ ದಳದ ಪುತ್ತೂರು ಘಟಕಕ್ಕೆ ಮತ್ತು ಜಿಲ್ಲೆಯ ಉಳಿದ 14 ಘಟಕಗಳಿಗೆ ಜಿಲ್ಲೆಯ ಬೇರೆಲ್ಲೂ ಸ್ವಂತ ಕಛೇರಿಯಿಲ್ಲ. ಘಟಕಗಳಿಗೆ ಬಾಡಿಗೆ ಕಟ್ಟಡದಲ್ಲಿ ಇರಲು ಇಲಾಖೆಯಿಂದ ಅನುದಾನ ಇಲ್ಲ. ಇಂತಹ ಸಂದರ್ಭದಲ್ಲಿ ಪುತ್ತೂರಿನ ಜನಪ್ರಿಯ ವೈದ್ಯ ಡಾ|| ಎಂ. ಕೆ. ಪ್ರಸಾದ್ ಅವರು ಮುಂದೆ ಬಂದು ಕಟ್ಟಡಕ್ಕೆ ಠೇವಣಿ ಮತ್ತು ಬಾಡಿಗೆಯನ್ನು ನೀಡುವ ಮೂಲಕ ಹಾರಾಡಿಯಲ್ಲಿ ಜನವರಿ 31 ರಂದು ಜಿಲ್ಲಾ ಗೃಹರಕ್ಷಕದಳ ಪುತ್ತೂರು ಘಟಕದ ನೂತನ ಕಛೇರಿ ಉದ್ಘಾಟಿಸಿದರು.

ಶಾಸಕ ಸಂಜೀವ ಮಠಂದೂರು ಅವರು ನೂತನ ಕಛೇರಿಯಲ್ಲಿ ದೀಪಜ್ವಲಿಸಿ ಮಾತನಾಡಿ ಪೊಲೀಸ್, ಅಗ್ನಿಶಾಮಕ, ಆರ್‍.ಟಿ.ಓ ಸೇರಿದಂತೆ ಜನರ ರಕ್ಷಣೆ ಮಾಡುವ ಹಾಗೂ ಯೋಗಕ್ಷೇಮ ನೋಡುವ ಇಲಾಖೆಯ ಎಲ್ಲಾ ಸೇವೆಗಳನ್ನು ಗೃಹರಕ್ಷಕ ದಳದವರು ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪೊಲೀಸರಷ್ಟೇ ಮಾಡಿದವರು ಗೃಹರಕ್ಷಕ ದಳದವರು. ಆದರೆ ಅನಿಶ್ಚಿತತೆಯ ಸೇವೆಯಲ್ಲಿ ಇರುವ ನಿಮ್ಮ ಬದುಕು ಅನಿಶ್ಚಿತತೆಯಲ್ಲಿ ಇರಬಾರದು ಎಂದು ನಿಮಗೆ ಭದ್ರತೆ ಕೊಡುವ ಕೆಲಸವನ್ನು ಡಾ|| ಎಂ.ಕೆ. ಪ್ರಸಾದ್ ಮಾಡಿದ್ದಾರೆ. ಮುಂದಿನ ದಿನ ಪೊಲೀಸ್ ಇಲಾಖೆಯಲ್ಲಿರುವಂತಹ ವ್ಯವಸ್ಥೆ ನಿಮಗೂ ಸಿಗುವಂತೆ ಮಂತ್ರಿಗಳಲ್ಲಿ ಮಾತನಾಡಿ ಸರಿಪಡಿಸುತ್ತೇನೆ. ಸ್ವಂತ ಕಛೆರಿ ಇರಬಹುದು ಅಥವಾ ಬಾಡಿಗೆ ಕುರಿತು ಪ್ರಸ್ತಾವನೆ ಸಲ್ಲಿಸುತ್ತೇನೆ. ನಿಮ್ಮ ಇಲಾಖೆಗೆ ಅರ್ಧ ಎಕರೆ ಜಾಗವನ್ನಾದರೂ ನೋಡುವ ಕೆಲಸ ಕಾರ್ಯ ಆರಂಭಿಸುತ್ತೇನೆ. ಪುತ್ತೂರಿಗೆ ಎಸ್‍.ಪಿ ಕಛೇರಿ ಬರುವ ಹಿನ್ನೆಲೆಯಲ್ಲಿ ಅದರ ಸಮೀಪವೇ ನಿಮಗೆ ಜಾಗ ಕಾದಿರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಸೇವೆ ಜನರಿಗೆ ಸಿಗಲಿ ಎಂದರು.

Also Read  ವಿಟ್ಲ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ವಂಚನೆ ► ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯ ಮಿದುಳು ನಿಷ್ಕ್ರಿಯ

ಕಛೇರಿ ಉದ್ಘಾಟಿಸಿದ ಆದರ್ಶ ಆಸ್ಪತ್ರೆಯ ಡಾ|| ಎಂ.ಕೆ. ಪ್ರಸಾದ್ ಅವರು ಮಾತನಾಡಿ ಸಂಬಳದ ಆಸೆ ಇಲ್ಲದೆ ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸುವ ಗೃಹರಕ್ಷಕ ದಳ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನಿಮಗೆ ತಿಂಗಳು ಪೂರ್ತಿ ಸಂಬಳ ಸಿಗುವ ವ್ಯವಸ್ಥೆ ಆಗಬೇಕು. ಸರಕಾರ ತನ್ನ ಪ್ರಚಾರಾರ್ಥ ನೀಡುವ ಜಾಹೀರಾತಿಗೆ ವೆಚ್ಚ ಮಾಡುವ ಬದಲು ಗೃಹರಕ್ಷಕ ದಳದವರಿಗೆ ಸ್ವಂತ ಕಟ್ಟಡ ಮಾಡಿಸಿಕೊಡುವ ಮತ್ತು ಅವರ ವೇತನದ ಚಿಂತನೆ ಮಾಡಬೇಕು ಎಂದರು. ಪುತ್ತೂರಿನ ಗೃಹರಕ್ಷಕ ದಳ ಕಛೇರಿಗೆ ನಿವೇಶನ ಸಿಗುವುದಾದರೆ ಅದು ನಗರ ಕೇಂದ್ರ ಸ್ಥಾನದಲ್ಲೇ ಸಿಗಬೇಕು. ಪ್ರಸ್ತುತ ಕಛೇರಿಗೆ ಏನೆಲ್ಲಾ ವ್ಯವಸ್ಥೆ ಬೇಕು ಅದನ್ನೇ ಪೂರೈಸುತ್ತೇನೆ ಎಂದು ಅವರು ಭರವಸೆ ನೀಡಿದರು. ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದವರ ಪಾಲು ಬಹುದೊಡ್ಡದಿದೆ. ಭಾರತದಲ್ಲಿ 6 ಲಕ್ಷ ಗೃಹರಕ್ಷಕ ದಳದವರಿಗೆ ಜಿಲ್ಲೆಯಲ್ಲಿ ಒಂದು ಸಾವಿರ ಮಂದಿ ಮತ್ತು ಪುತ್ತೂರಿನಲ್ಲಿ 73 ಮಂದಿ ಗೃಹರಕ್ಷಕ ಸಿಬ್ಬಂದಿಗಳಿದ್ದಾರೆ. ಪುತ್ತೂರಿನ ಗೃಹರಕ್ಷಕ ದಳಕ್ಕೆ 50 ವರ್ಷಗಳ ಇತಿಹಾಸ ಇದೆ. ಆದರೆ ಸ್ವಂತ ಕಟ್ಟಡ ಇಲ್ಲದ್ದು ಕೊರತೆ ಇದೆ. ಬೇರೆ ಬೇರೆ ತಾಲೂಕಿನಲ್ಲಿ ಪೊಲೀಸ್ ಠಾಣೆಯ ಹಳೇ ಕಛೇರಿ ಅಥವಾ ಪೊಲೀಸ್ ಠಾಣೆಯ ಒಂದು ಕೊಠಡಿಯನ್ನು ಗೃಹರಕ್ಷಕ ದಳಕ್ಕೆ ಕೊಟ್ಟಿದ್ದಾರೆ. ಪುತ್ತೂರಿನಲ್ಲಿ ಮಾತ್ರ ಕೊಠಡಿ ಕೊರತೆ ಎದುರಿಸುತ್ತಿದ್ದೆವು. ಇವತ್ತು ದಾನಿಗಳ ರೂಪದಲ್ಲಿ ಡಾ|| ಎಂ.ಕೆ. ಪ್ರಸಾದ್ ಅವರು ಕೊಠಡಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರಲ್ಲದೆ, ಮುಂದೆ ನಮಗೆ ಸ್ವಂತ ನಿವೇಶನ ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಆಯುಷ್ ಫೆಡರೇಷನ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಡಾ|| ಸತ್ಯನಾರಾಯಣ ಅಸ್ತ ಅವರು ಶುಭ ಹಾರೈಸಿದರು.

Also Read  ಒಮಿಕ್ರಾನ್ ಆತಂಕ- ಶಾಲಾ ಕಾಲೇಜುಗಳಲ್ಲಿ ಸಭೆ ಸಮಾರಂಭ ರದ್ದು ➤ ಮದುವೆಗೆ 500 ಮಂದಿಗೆ ಮಾತ್ರ ಅವಕಾಶ

ಗೃಹರಕ್ಷಕ ದಳಕ್ಕೆ ಕಾರಣಕರ್ತರಾದ ರಾಮ್‍ದಾಸ್ ಹಾರಾಡಿ ಮತ್ತು ಕಟ್ಟಡದ ಕೊಠಡಿಗೆ ಠೇವಣಿ ಮತ್ತು ಬಾಡಿಗೆಗೆ ಠೇವಣಿ ಮತ್ತು ಬಾಡಿಗೆಯನ್ನು ನೀಡಿ ಸಹಕರಿಸಿದ ಡಾ|| ಎಂ.ಕೆ. ಪ್ರಸಾದ್ ಮುಂದಿನ ದಿನ ಕಛೇರಿಗೆ ಜಾಗ ಕಾದಿರಿಸುವ ಭರವಸೆ ವ್ಯಕ್ತಪಡಿಸುವ ಶಾಸಕ ಸಂಜೀವ ಮಠಂದೂರು ಮತ್ತು ಸಂಸ್ಥೆಗೆ ಕಪಾಟು ಕೊಡುಗೆಯಾಗಿ ನೀಡಿದ ಉದ್ಯಮಿ ರಜಾಕ್ ಬಪ್ಪಳಿಗೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗೃಹರಕ್ಷಕ ದಳದ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಪೂಜಾರಿ, ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ಉಪಸ್ಥಿತರಿದ್ದರು. ಕಟ್ಟಡದ ಮಾಲಕ ದಿನೇಶ್ ಬಲ್ಲಾಳ್ ಸಭೆಯಲ್ಲಿ ಉಪಸ್ಥಿತರಿದ್ದರು. ಗೃಹರಕ್ಷಕ ದಳದ ಸಿಬ್ಬಂದಿಗಳಾದ ಜಗನ್ನಾಥ್, ಸಯ್ಯದ್ ಇಬ್ರಾಹಿಂ, ವಿಠಲ್ ನಾಯ್ಕ, ಅಶೋಕ್ ಚಿದಂಬರ್, ಅಬ್ದುಲ್ ಸಲೀಂ ಅತಿಥಿಗಳನ್ನು ಗೌರವಿಸಿದರು. ಧನುಷ್ ಪ್ರಾರ್ಥಿಸಿದರು. ಸಂತೋಷ್ ಜೆ.ಪಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top