(ನ್ಯೂಸ್ ಕಡಬ) newskadaba.com ಸುಳ್ಯ, ಜ. 31. ಅಭಿವೃದ್ಧಿ ಎಂಬುದು ನಿಂತ ನೀರಲ್ಲ. ಅದು ನಿರಂತರ ಪ್ರಕ್ರಿಯೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ಸರಕಾರ, ಅಧಿಕಾರಿಗಳ ಜೊತೆಗೆ ಜನರ ಸಹಭಾಗಿತ್ವವೂ ಬಹಳ ಮುಖ್ಯವಾದುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಭಾನುವಾರ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಹಾಗು ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕುಮಟ್ಟದ ಹಾಗು ಗ್ರಾಮ ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಜನರ ಮಧ್ಯೆ ಇಳಿದು ಕೆಲಸ ಮಾಡಬೇಕು. ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡ್ತಾ ಇದ್ದೇವೆಯೇ ಎಂದು ಪ್ರತಿಯೊಬ್ಬರೂ ಅವಲೋಕನ ಮಾಡಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಇದ್ದರೆ, ಅಕ್ರಮಗಳು ಕಂಡು ಬಂದರೆ ಅದನ್ನು ನೇರವಾಗಿ ಸರಿಯಾದ ಮಾರ್ಗದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತನ್ನಿ ಎಂದು ಅವರು ಹೇಳಿದರು. ಊರಿನ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು. ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಬಲು ದೊಡ್ಡದು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಷ್ಟು ಕ್ರಿಯಾಶೀಲವಾಗಿರುವ ಸಂಘವನ್ನು ಬೇರೆಲ್ಲೂ ನೋಡಿಲ್ಲ. ಗ್ರಾಮ ವಾಸ್ತವ್ಯ ಕಲ್ಪನೆ ಕಾರ್ಯಕ್ರಮ ಶ್ಲಾಘನೀಯವಾದುದು ಎಂದು ಹೇಳಿದರು.
ಕೋವಿಡ್ ಭೀತಿ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ. ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣ ಕಂಡು ಬಂದರೆ ಜಿಲ್ಲಾಡಳಿತಕ್ಕೆ ಹೆಚ್ಚು ಒತ್ತಡ ಬರುತ್ತದೆ. ಆದುದರಿಂದ ಗ್ರಾಮೀಣ ಪ್ರದೇಶದ ಜನರು ಹೆಚ್ಚು ಜಾಗೃತರಾಗಿರಬೇಕು. ಎಲ್ಲರೂ ಮಾಸ್ಕ್ ಧರಿಸಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ನೀಡಿದರು. ಕಡಬ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಜಯಂತಿ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಕಡಬ ತಾ.ಪಂ . ಸದಸ್ಯೆ ಆಶಾ ಲಕ್ಷ್ಮಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ತಹಶಿಲ್ದಾರ್ ಅನಂತ ಶಂಕರ್, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಆರ್.ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಪತ್ರಕರ್ತ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಈ ಸಂಧರ್ಬದಲ್ಲಿ ಕೊಂಬಾರು ಗ್ರಾಪಂನ ೫ ವರ್ಷ ಗಳ ಸಾಧನೆ ಯ ಕೈಪಿಡಿ ಬಿಡುಗಡೆಗೊಳಿಸಲಾಯಿತು.