➤➤ ಆರೋಗ್ಯ ಮಾಹಿತಿ “ಜೀವರಕ್ಷಕ ಇನ್ಸುಲಿನ್ ಔಷಧಿ” ✍️ ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, . 31. ಮಧುಮೇಹ ರೋಗಿಗಳ ಸಂಖ್ಯೆ  ದಿನದಿಂದ ದಿನಕ್ಕೆ  ಹೆಚ್ಚಾಗುತ್ತಲೇ ಇದ್ದು, 2020ರ ಅಂತ್ಯಕ್ಕೆ  ವಿಶ್ವದಾದ್ಯಂತ 12 ಕೋಟಿ ಮಧುಮೇಹಿಗಳು ಇದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದು ಬಂದಿದೆ. ವಾರ್ಷಿಕವಾಗಿ 1.6 ಕೋಟಿಗಿಂತಲೂ ಹೆಚ್ಚು ಮಂದಿ ಮಧುಮೇಹ ಸಂಬಂಧಿ ರೋಗಗಳಿಂದ  ಸಾಯುತ್ತಿದ್ದಾರೆ.  ಮಧುಮೇಹ ಎನ್ನುವುದು ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ಕಾಯಿಲೆ ಆಗಿದ್ದು, ಮೊದಲೆಲ್ಲಾ ಸಿರಿವಂತರ ಕಾಯಿಲೆ ಎಂಬ ಹಣೆಪಟ್ಟಿ ಪಡೆದಿತ್ತು. ಆದರೆ ಇದೀಗ ಬಡ ಮತ್ತು ಮಧ್ಯಮ ವರ್ಗದ ಜನರೂ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಟೈಪ್ 2 ಡಯಾಬಿಟಿಸ್ ರೋಗಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸೋಮಾರಿ ಜೀವನಶೈಲಿ, ಜಂಕ್ ಆಹಾರ ಸೇವನೆ, ವ್ಯಾಯಾಮವಿಲ್ಲದ, ಒತ್ತಡದಿಂದ ಕೂಡಿದ ಕೆಲಸದ ವಾತಾವರಣ ಮತ್ತು ಕಲುಷಿಗೊಂಡ ವಾತಾವರಣ  ಹಾಗೂ ಆಹಾರ ಇವೆಲ್ಲವೂ  ಸೇರಿ  ಹೆಚ್ಚು  ಹೆಚ್ಚು ಜನರು  ಮಧುಮೇಹಕ್ಕೆ ತುತ್ತಾಗಿರುವುದು ವಿಷಾದನೀಯ.

ಮಧುಮೇಹ ರೋಗವೇ ಅಲ್ಲ

ಹೆಚ್ಚಿನವರು ಸಕ್ಕರೆ ಕಾಯಿಲೆ ಎನ್ನುವುದು ರೋಗ ಎಂದು ತಪ್ಪು ತಿಳಿದಿದ್ದಾರೆ. ಇದೊಂದು ನಮ್ಮ ದೇಹದ ಜೈವಿಕ ಕ್ರಿಯೆಗಳ ಅಸಮತೋಲನ ಸ್ಥಿತಿಯಾಗಿರುತ್ತದೆ. ನಾವು ಸೇವಿಸಿದ ಆಹಾರ ಕೊನೆಗೆ ಗ್ಲೂಕೋಸ್ ಆಗಿ ಪರಿವರ್ತನೆಯಾಗಿ ಜೀವಕೋಶಗಳಿಗೆ ಸೇರುತ್ತದೆ. ಈ ಪ್ರಕ್ರಿಯೆಗೆ ಇನ್ಸುಲಿನ್ ಎಂಬ ರಸದೂತ ಅತೀ ಅಗತ್ಯ. ದೇಹದಲ್ಲಿ ಇನ್ಸುಲಿನ್ ರಸದೂತದ ಕೊರತೆ  ಉಂಟಾದಾಗ ಅಥವಾ ಇನ್ಸುಲಿನ್ ರಸದೂತದ  ಕಾರ್ಯಕ್ಷಮತೆ  ಕುಗ್ಗಿದಾಗ ಆ ವ್ಯಕ್ತಿಗೆ  ಮಧುಮೇಹ ತಗಲಿಕೊಳ್ಳುತ್ತದೆ. ಅನುವಂಶಿಕವಾಗಿ ತಂದೆ ತಾಯಿಗೆ ಮಧುಮೇಹ ಇದ್ದಲ್ಲಿ 50% ಮಕ್ಕಳಿಗೆ ಮಧುಮೇಹ ಬರುವ ಸಾಧ್ಯತೆ  ಇರುತ್ತದೆ. ಇದು ಹುಟ್ಟುವಾಗಲೇ  ಬರುವ ಜನ್ಮಜಾತ ಮಧುಮೇಹ ಆಗಿರುತ್ತದೆ.  ಇಂತಹ ಸಂದರ್ಭಗಳಲ್ಲಿ ಅವರಿಗೆ ಜೀವ ಪರ್ಯಂತ ಇನ್ಸುಲಿನ್ ರಸದೂತದ ನಿರಂತರ ಪೂರೈಕೆ ಬೇಕಾಗುತ್ತದೆ. ಇದನ್ನು ಟೈಪ್ 1 ಡಯಾಬಿಟಿಸ್ ಎನ್ನುತ್ತಾರೆ. ಇನ್ನು ಆರಾಮದಾಯಕ ಜೀವನಶೈಲಿ, ಕೊಬ್ಬು ಶೇಖರಣೆ ಮತ್ತು ಜಂಕ್ ಆಹಾರ ಸೇವನೆಯಿಂದ ಬರುವ ಮಧುಮೇಹವನ್ನು  ಟೈಪ್ 2 ಡಯಾಬಿಟಿಸ್  ಎನ್ನುತ್ತಾರೆ. ಇಲ್ಲಿ ಅಂತಹಾ  ವ್ಯಕ್ತಿಯ ದೇಹದಲ್ಲಿ  ಸಾಕಷ್ಟು ಇನ್ಸುಲಿನ್ ರಸದೂತ ಇದ್ದರೂ ಅವುಗಳ ಕಾರ್ಯಕ್ಷಮತೆ ಚೆನ್ನಾಗಿರುವುದಿಲ್ಲ. ಇಂತಹಾ ಮಧುಮೇಹಿಗಳಿಗೆ ಜೀವನಶೈಲಿ  ಪರಿವರ್ತನೆ, ಸಮತೋಲಿತ ಆಹಾರ  ಮತ್ತು ಒತ್ತಡರಹಿತ ಜೀವನ ಪದ್ಧತಿ ಹಾಗೂ  ಮಧುಮೇಹ ನಿಯಂತ್ರಣ ಗುಳಿಗೆಗಳ ಮುಖಾಂತರ  ಮಧುಮೇಹವನ್ನು ನಿಯಂತ್ರಿಸಲಾಗುತ್ತದೆ. ಈ ರೀತಿಯ ಮಧುಮೇಹ ನಡುವಯಸ್ಕರಲ್ಲಿ ಹೆಚ್ಚು ಕಂಡು ಬರುತ್ತದೆ. ಇವರಿಗೆ  ಇನ್ಸುಲಿನ್ ಇಂಜೆಕ್ಷನ್  ಅವಧ್ಯಕೆ  ಹೆಚ್ಚು ಬೇಕಾಗುವುದಿಲ್ಲ. ಆದರೆ ಟೈಪ್ 1 ಡಯಾಬಿಟಿಸ್ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಅವರ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಹಾಳುಗೆಡವುದೆ. ಇಂತಹ  ಮಧುಮೇಹಿಗಳಿಗೆ  ನಿರಂತರವಾಗಿ  ನಿಯಮಿತವಾಗಿ ಪ್ರತಿದಿನ ಇನ್ಸುಲಿನ್  ಚುಚ್ಚುಮದ್ದಿನ  ಅವಶ್ಯಕತೆ ಇರುತ್ತದೆ.

Also Read  ನಮ್ಮ ತುಳುನಾಡ್ ನಮ್ಮ ಹೆಮ್ಮೆ ➤ ಮುಕಾಂಬಿ_ಗುಳಿಗ

 

ಏನಿದು ಇನ್ಸುಲಿನ್?

ಇನ್ಸುಲಿನ್ ಎನ್ನುವುದು ಮೆದೋಜಿರಕ ಗ್ರಂಥಿಯ ಲ್ಯಾಂಗರ್ ಹ್ಯಾನ್ ಬೀಟಾ ಜೀವಕೋಶಗಳಿಂದ ಉತ್ಪತ್ತಿಯಾಗುವ  ರಸದೂತವಾಗಿರುತ್ತದೆ. ಜರ್ಮನಿಯ ವೈದ್ಯಕೀಯ ವಿದ್ಯಾರ್ಥಿ ಡಾ|| ಲ್ಯಾಂಗರ್‍ಹಾನ್ 1869ರಲ್ಲಿ ಈ ಜೀವಕೋಶಗಳನ್ನು ಕಂಡುಹಿಡಿದ ಕಾರಣದಿಂದ ಅವುಗಳಿಗೆ  ಅದೇ ಹೆಸರನ್ನು ಇಡಲಾಯಿತು. ಬೀಟಾ ಜೀವಕೋಶಗಳು ಇನ್ಸುಲಿನ್ ರಸದೂತವನ್ನು ಬಿಡುಗಡೆ ಮಾಡುತ್ತದೆ ಎಂಬುದನ್ನು ಸರ್‍ಪೆಟ್ರಿಕ್  ಗ್ರಾಂಟ್ ಬ್ಯಾಟಿಂಗ್ (1891-1941) ಎಂಬಾತ ಕಂಡುಹಿಡಿದ. ಅದಕ್ಕಾಗಿ  ಆತನಿಗೆ 1921ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತ್ತು. ದಿನವೊಂದರಲ್ಲಿ ಕನಿಷ್ಠ 30 ಯೂನಿಟ್ ಇನ್ಸುಲಿನ್ ರಕ್ತಕ್ಕೆ ಬಿಡುಗಡೆಯಾಗುತ್ತದೆ. ಒಬ್ಬ ಆರೋಗ್ಯವಂತ  ವ್ಯಕ್ತಿಯ ರಕ್ತದಲ್ಲಿ ಪ್ಲಾಸ್ಮಾ ಇನ್ಸುಲಿನ್ ಮಟ್ಟ 10 ಮೈಕ್ರೋ ಯುನಿಟ್ ಪ್ರತಿ ಮಿಲೀ ಲೀಟರ್‍ಗೆ ಇರುತ್ತದೆ.

ಹೇಗೆ ತೆಗೆದುಕೊಳ್ಳಬೇಕು?

ಇನ್ಸುಲಿನ್ ಚುಚ್ಚುಮದ್ದು ಪರಿಣಾಕಾರಿಯಾಗಲು ಯಾವ ರೀತಿ ಯಾವಾಗ, ಹೇಗೆ, ಎಲ್ಲಿ ತೆಗೆದುಕೊಳ್ಳಬೇಕು  ಎಂಬುದರ ಮಾಹಿತಿ  ಅತೀ ಅಗತ್ಯ.

1)         ಅತಿ ಮುಖ್ಯವಾಗಿ ವೈದ್ಯರು ನೀಡಿದ ಸಲಹೆಯಂತೆ ಇನ್ಸುಲಿನ್ ತೆಗೆದುಕೊಳ್ಳತಕ್ಕದ್ದು.

2)         ಇನ್ಸುಲಿನ್ ಚುಚ್ಚುಮದ್ದನ್ನು ಯಾವಾಗಲೂ ಕೊಬ್ಬು ಜಾಸ್ತಿ ಇರುವ ಜಾಗದಲ್ಲಿ ಚುಚ್ಚಬೇಕು. ಯಾವುದೇ ಕಾರಣಕ್ಕೂ ಸ್ನಾಯುಗಳ ಜಾಗದಲ್ಲಿ ಕೊಡಬಾರದು. ಏಕೆಂದರೆ ಅದು  ಹೆಚ್ಚು  ನೋವು ತರುತ್ತದೆ ಮತ್ತು ಬಹಳ ವೇಗವಾಗಿ ಹೀರಿಕೊಳ್ಳುತ್ತದೆ. ಇದರಿಂದ ಶೀಘ್ರವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು  ಕಡಿಮೆಯಾಗಿಸುವ ಅಪಾಯ ಇರುತ್ತದೆ.

3)         ಯಾವುದೇ ಕಾರಣಕ್ಕೂ ಗಾಯವಿರುವ  ಜಾಗದಲ್ಲಿ, ಊತವಿರುವ ಜಾಗ, ನರಗಳ ಮೇಲೆ  ಮತ್ತು  ಉಬ್ಬಿದಂತಿರುವ  ರಕ್ತನಾಳಗಳ ಜಾಗದಲ್ಲಿ  ಇನ್ಸುಲಿನ್ ಚುಚ್ಚುಮದ್ದು ನೀಡಬಾರದು.

4)         ಕೈ ತೊಡೆ ಮತ್ತು ಕಿಬ್ಬೊಟ್ಟೆ  ಜಾಗದಲ್ಲಿ ಇನ್ಸುಲಿನ್ ಮದ್ದು ನೀಡಿದರೆ ತಕ್ಷಣವೇ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು  ನಿಯಂತ್ರಿಸಿ ವ್ಯಕ್ತಿಯನ್ನು  ಸಹಜ ಸ್ಥಿತಿಗೆ ಬರುವಂತೆ ಮಾಡುತ್ತದೆ.

Also Read  ಹಬ್ಬಹರಿದಿನಗಳಲ್ಲಿ ಬಣ್ಣ ಹಚ್ಚುವ ಮೊದಲು ಒಂದು ಕ್ಷಣ ಯೋಚಿಸಿ..!! ಡಾ| ಮುರಲೀ ಮೋಹನ್ ಚೂಂತಾರುರವರ ಲೇಖನ

5)         ಕಿಬ್ಬೊಟ್ಟೆ ಬಳಿ ಚುಚ್ಚುಮದ್ದು ನೀಡವಾಗ ಹೊಕ್ಕಳಿನಿಂದ ಮೂರು ಇಂಚು ದೂರವಿರಬೇಕು. ತೊಡೆಗೆ ಕೊಡುವಾಗ ಮುಂಭಾಗ ಅಥವಾ ಹೊರಭಾಗ ಸೂಕ್ತವಾಗಿರುತ್ತದೆ. ಕೈಗೆ ಕೊಡುವಾಗ ಮೊಣಕೈ ಮತ್ತು  ಭುಜದ ನಡುವಿನ  ಜಾಗಕ್ಕೆ ಕೊಡಬಹುದಾಗಿದೆ.

6)         ಚುಚ್ಚುಮದ್ದು ನೀಡುವಾಗ ನಿಮ್ಮ ಸ್ನಾಯುಗಳು ಆರಾಮವಾಗಿರಬೇಕು. ಚುಚ್ಚುಮದ್ದು ನೀಡಿದ ಬಳಿಕ ಆ ಜಾಗವನ್ನು ಯಾವುದೇ  ಕಾರಣಕ್ಕೂ  ಉಜ್ಜಬಾರದು ಮತ್ತು ಮಸಾಜ್ ಮಾಡಬಾರದು.

7)         ಒಮ್ಮೆ ಕೊಟ್ಟ ಜಾಗಕ್ಕೆ ಮಗದೊಮ್ಮೆ ಕೊಡುವಾಗ ಒಂದು ಬೆರಳಿನಷ್ಟು ಅಂತರವಿರಲಿ. ಒಂದೇ ಜಾಗದಲ್ಲಿ ನೀಡಿದರೆ  ಆ ಜಾಗದಲ್ಲಿ  ಗಟ್ಟಿಯಾಗಿ ಗಂಟು ಉಂಟಾಗಬಹುದು.

8)         ಬೆಳಗ್ಗಿನ ಹೊತ್ತು ಕೈಗಳಿಗೆ ನೀಡಿ ಮಧ್ಯಾಹ್ನ ತೊಡೆಯ ಜಾಗದಲ್ಲಿ ನೀಡಿದರೆ ಅದೇ ಕ್ರಮವನ್ನು ಮುಂದುವರಿಸಿ.

9)         ಯಾವುದೇ ಕಾರಣಕ್ಕೆ ಸೂಜಿಯನ್ನು ಇವರೊಡನೆ ಹಂಚಿಕೊಳ್ಳಬೇಡಿ. ಒಂದೇ ಸೂಜಿಯನ್ನು ಮತ್ತೆ  ಮತ್ತೆ  ಬಳಸುವುದು ಸೂಕ್ತವಲ್ಲ. ಪದೇ ಪದೇ  ಬಳಸಿದಾಗ ಸೂಜಿ  ಚರ್ಮದೊಳಗೆ ಹೋದಾಗ ಬಗ್ಗುತ್ತದೆ ಮತ್ತು ತುಂಡಾಗಿ  ಚರ್ಮದೊಳಗೆ ಉಳಿದುಕೊಳ್ಳುವ  ಸಾಧ್ಯತೆ ಇರುತ್ತದೆ.

10)       ಇಂಜೆಕ್ಷನ್ ತೆಗೆದುಕೊಳ್ಳುವ ಸೂಜಿಯ ಗಾತ್ರದ ಬಗ್ಗೆ ಮತ್ತು ವಿಧಾನದ ಬಗ್ಗೆ ವೈದ್ಯರಿಂದ ಮಾರ್ಗದರ್ಶನ ಪಡೆಯಿರಿ. ನಿಮಗೆ ಸಿರಿಂಜ್ ಸರಿ ಹೊಂದದಿದ್ದಲ್ಲಿ ವೈದ್ಯರನ್ನು ಕಾಣಬೇಕು. ಪರ್ಯಾಯವಾಗಿ ಇನ್ಸುಲಿನ್ ತೆಗೆದುಕೊಳ್ಳಲು ಪೆನ್ ಅಥವಾ ಪಂಪ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

11)       ನಿಮ್ಮ ಚರ್ಮ ಒಳಗೆ ತೆಳ್ಳಗಿದ್ದಲ್ಲಿ  ಚುಚ್ಚುಮದ್ದು ನೀಡುವ  ಭಾಗದ ಚರ್ಮವನ್ನು ಪಿಂಚ್  ಮಾಡಿ ಬೆರಳಿನಿಂದ ಹಿಡಿದುಕೊಳ್ಳಬೇಕು ಮತ್ತು ಸೂಜಿಯನ್ನು 45 ಡಿಗ್ರಿ ಕೋನದಿಂದ ಚರ್ಮವನ್ನು ಪ್ರವೇಶಿಸಬೇಕು. ಸೂಜಿ ಪೂರ್ತಿಯಾಗಿ ಚರ್ಮದೊಳಗೆ  ಹೋಗಬೇಕು. ಹೀಗೆ  ಮಾಡುವುದರಿಂದ ಔಷಧಿ  ನೇರವಾಗಿ  ಚರ್ಮದ ಕೆಳಗಿನ  ಭಾಗವಾದ  ಕೊಬ್ಬಿನ  ಪದರಕ್ಕೆ  ತಲುಪುತ್ತದೆ. ಔಷಧಿ  ನೇರವಾಗಿ ಸ್ನಾಯುಗಳಿಗೆ  ಹೋಗಬಾರದು. ಇನ್ಸುಲಿನ್ ಔಷಧಿ ನೀಡಲು ಜಾಸ್ತಿ ಕೊಬ್ಬು ಇರುವ ಜಾಗಗಳಾದ  ಹೊಟ್ಟೆ, ತೊಡೆ, ನೀತಂಬ ಮತ್ತು ತೋಳುಗಳು ಉತ್ತಮ ಜಾಗಗಳಾಗಿರುತ್ತದೆ.

12)       ನಿಮ್ಮ  ಹೆಬ್ಬೆರಳು ಮತ್ತು  ತೋರು ಬೆರಳಿನಿಂದ ಸಿರಿಂಜನ್ನು  ಹಿಡಿದುಕೊಳ್ಳಬೇಕು. ನಿಮ್ಮ ಚರ್ಮ ದಪ್ಪವಿದ್ದಲ್ಲಿ 90 ಡಿಗ್ರಿ ಕೋನದಲ್ಲಿ ಸೂಜಿಯನ್ನು ಚುಚ್ಚಬೇಕು. ಇದರಿಂದ ಸೂಜಿ ಮಾಂಸಖಂಡದೊಳಗೆ ತಲುಪುವುದ್ನು ತಪ್ಪಿಸುತ್ತದೆ. ಸಿರಿಂಜ್‍ನ ಹಿಂಭಾಗವನ್ನು ನಿಧಾನವಾಗಿ ಒತ್ತಬೇಕು. ನಿಧಾನವಾಗಿ ಚರ್ಮವನ್ನು ಬಿಡಬೇಕು ಮತ್ತು  1 ರಿಂದ 10 ರವರೆಗೆ ಎಣಿಕೆ ಮಾಡುತ್ತಾ  ಸಿರಿಂಜ್‍ನ್ನು  ನಿಧಾನವಾಗಿ  ಹೊರತೆಗೆಯಬೇಕು. ಕನಿಷ್ಠ 5 ಸೆಕೆಂಡ್‍ಗಳ  ಕಾಲ ಸೂಜಿ ಚರ್ಮದಲ್ಲಿ ಇರಬೇಕು.

Also Read  ಆರೋಗ್ಯ ಭಾದೆ ಸಮಸ್ಯೆಗೆ ಇದು ರಾಮ ಬಾಣ ಮತ್ತು ದಿನ ಭವಿಷ್ಯ.

13)       ಇನ್ಸುಲಿನ್‍ಗೆ ವಾತಾವರಣದ ತಾಪಮಾನ ಇರಬೇಕಾಗುತ್ತದೆ. ಈ ತಾಪಮಾನದಲ್ಲಿ  ಇಲ್ಲದಿದ್ದಲ್ಲಿ ಚುಚ್ಚಿದ ಜಾಗದಲ್ಲಿ ಗಾಯವಾಗುತ್ತದೆ. ಈ ಕಾರಣದಿಂದ ಸೂಕ್ತವಾದ ಜಾಗದಲ್ಲಿ ಇನ್ಸುಲಿನ್  ಔಷಧಿ  ಇಡುವುದು. ಒಮ್ಮೆ  ತೆರೆದ ಬಳಿಕ  ತಿಂಗಳುಗಳ  ವರೆಗೆ ರೂಮಿನ  ತಾಪಮಾನ ಅಂದರೆ  59 ರಿಂದ 60 ಡಿಗ್ರಿ ಪ್ಯಾರನ್ ಹೀಟ್ ನಲ್ಲಿರಬೇಕು. ಸೂರ್ಯಕಿರಣ ನೇರವಾಗಿ ಬೀಳುವ ಭಾಗ, ಫ್ರೀಜರ್, ಹವಾನಿಯಂತ್ರಿತ ಯಂತ್ರಗಳ ಬಳಿ ಅಥವಾ ಬಿಸಿಯಾಗುವಂತಹ  ಉಪಕರಣಗಳ ಬಳಿ ಇನ್ಸುಲಿನ್ ಔಷಧಿ  ಇಡಬಾರದು.

14)       ಇನ್ಸುಲಿನ್  ಚುಚ್ಚುಮದ್ದು  ನೀಡಿದ ಜಾಗದಲ್ಲಿ  ರಕ್ತಸ್ರಾವವಾಗುತ್ತಿದ್ದಲ್ಲಿ  ಅಥವಾ ಊತ ನೋವು ಉಂಟಾದಲ್ಲಿ  ತಕ್ಷಣವೇ  ವೈದ್ಯರನ್ನು ಕಾಣತಕ್ಕದ್ದು.

ಡಾ|| ಮುರಲೀಮೋಹನ ಚೂಂತಾರು

       ಸುರಕ್ಷಾ ದಂತ ಚಿಕಿತ್ಸಾಲಯ

         ಮೊ: 9845135787

error: Content is protected !!
Scroll to Top