(ನ್ಯೂಸ್ ಕಡಬ) newskadaba.com ಮಂಗಳೂರು, ಜ. 31. ನಗರದ ಕೊಟ್ಟಾರ ಚೌಕಿ ಅಬ್ಬಕ್ಕ ನಗರದಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ, ಕೇಂದ್ರ ಕಚೇರಿಯಲ್ಲಿ ರೈತರಿಗೆ ಹಾಗೂ ನಿಗಮದ ಎಲ್ಲಾ ಸಿಬ್ಬಂದಿಗಳಿಗೆ ಇತ್ತೀಚೆಗೆ ಗೇರು ಕೃಷಿಯ ಬಗ್ಗೆ ಸಂವಾದ, ಪ್ರೇರಣಾ ಮತ್ತು ಮಾನವ ಸಂಪನ್ಮೂಲದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ನಿಗಮದ ಅಧ್ಯಕ್ಷ ಬಿ. ಮಣಿರಾಜ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ಗೇರು ಕೃಷಿ ವಿಸ್ತರಿಸುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್. ನೆಟಾಲ್ಕರ್, ಅವರು ತರಬೇತಿಯ ಉದ್ದೇಶದ ಬಗ್ಗೆ ಮತ್ತು ನಿಗಮದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಉಳ್ಳಾಲ ಪ್ರಾದೇಶಿಕ ನಿಲ್ದಾಣದ ಕೃಷಿ ಮತ್ತು ತೋಟಗಾರಿಕೆಯ ಮಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ|| ರವಿರಾಜ್ ಶೆಟ್ಟಿ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿವಿಧ ಜಾತಿಯ ಗೇರು ತಳಿಗಳು ಮತ್ತು ಇಳುವರಿ, ಗೇರು ನಾಟಿಮಾಡುವ ವಿಧಾನ, ಕಸಿ ಕಟ್ಟುವ ವಿಧಾನ ಮಳೆಯಿಂದ ಆಗುವಂತಹ ತೊಂದರೆಗಳು ಇತ್ಯಾದಿಗಳ ಬಗ್ಗೆ ವೈಜ್ಞಾನಿಕವಾಗಿ ಮತ್ತು ಉಳ್ಳಾಲ ಗೇರು ಸಂಶೋಧನೆಯಲ್ಲಿ ಗೇರು ಕೃಷಿಯ ಬಗ್ಗೆ ಪ್ರಾತ್ಯಕ್ಷತೆ ನೀಡಿದರು. ನಗರದ ಮೈರಾಡಾ ಸಂಸ್ಥೆಯ ರಾಮಚಂದ್ರ ಭಟ್ ರವರು ವ್ಯಕ್ತಿತ್ವ ವಿಕಸನ ಮತ್ತು ಮಾನವ ಸಂಪನ್ಮೂಲದ ಬಗ್ಗೆ ತರಬೇತಿ ನೀಡಿದರು. ನಿಗಮದ ಮೂರು ವಿಭಾಗಗಳಿಂದ ಆಯ್ಕೆ ಮಾಡಿ, ಉತ್ತಮವಾಗಿ ಕೆಲಸ ನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಯಿತು. ಕಚೇರಿಯ ವ್ಯವಸ್ಥಾಪಕ ಲಕ್ಮೀಶ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಕುಮಟಾ ವಿಭಾಗದ ಪ್ರಭಾರ ಅಧೀಕ್ಷಕ ಪ್ರಮೋದ್ ಗಾಂವ್‍ಕರ್ ನೇಡುತೋಪು ರವರು ವಂದಿಸಿದರು.