(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 30. ಇಲ್ಲಿನ ಸಿಸಿಬಿ ಪೊಲೀಸರು ಕರ್ತವ್ಯದ ವೇಳೆ ಕುತ್ತಾರಿನ ಬಾರ್ ಒಂದರಲ್ಲಿ ಪಾರ್ಟಿ ಮಾಡುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಮಂಗಳೂರು ಪೋಲೀಸ್ ಕಮೀಷನರ್ ಶಶಿಕುಮಾರ್ ಆದೇಶಿಸಿದ್ದಾರೆ.
ಮಂಗಳೂರು ಹೊರವಲಯದ ಕುತ್ತಾರು ಸಾಗರ್ ಎಂಬ ಹೆಸರಿನ ಬಾರಲ್ಲಿ ಬುಧವಾರ ಮದ್ಯಾಹ್ನ ಮಂಗಳೂರು ಸಿಸಿಬಿಯ 8 ಜನರ ತಂಡವೊಂದು ಹತ್ತಿರದ ಬಸ್ಸು ನಿಲ್ದಾಣದ ಬಳಿ ತಮ್ಮ ಸರಕಾರಿ ಟಿ.ಟಿ ವಾಹನವನ್ನು ನಿಲ್ಲಿಸಿ ಪಾರ್ಟಿಯಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುತ್ತಾರಿನ ಸ್ಥಳೀಯ ಕ್ರಿಕೆಟ್ ಬೆಟ್ಟಿಂಗ್ ಆರೋಪಿಯೊಂದಿಗೆ ನಡೆದ ಪಾರ್ಟಿ ವೀಡಿಯೋ ಇದಾಗಿದ್ದು, ರೌಡಿಗಳು ಹಾಗೂ ಅಕ್ರಮಿಗಳ ಹೆಡೆ ಮುರಿ ಕಟ್ಟಬೇಕಾದ ಸಿಸಿಬಿ ಪೊಲೀಸರೇ ಅಕ್ರಮಿಗಳ ಜೊತೆ ಸೇರಿ ಈ ರೀತಿ ಪಾರ್ಟಿ ಮಾಡಿದರೆ ಜನಸಾಮಾನ್ಯರಿಗೆ ಇವರಿಂದ ನ್ಯಾಯ ಮರೀಚಿಕೆಯ ವಿಷಯವೇ ಆಗಿದೆ. ಈ ಬಗ್ಗೆ ಮಂಗಳೂರು ಪೋಲೀಸ್ ಕಮೀಷನರ್ ಶಶಿಕುಮಾರ್ ಅವರು ತನಿಖೆ ನಡೆಸಲು ಕಾನೂನು ಮತ್ತೆ ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್ ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.