(ನ್ಯೂಸ್ ಕಡಬ) newskadaba.com ಮಂಗಳೂರು, ಜ. 29. ಮುಂದಿನ ದಿನಗಳಲ್ಲಿ ಬ್ಯಾರಿ ಲಿಪಿಯನ್ನು ಬಳಸಿ ಅಧ್ಯಯನ ಮಾಡಬೇಕೆಂದು ಬಯಸುವವರಿಗೆ ಬ್ಯಾರಿ ಭಾಷೆಯಲ್ಲಿ ಲಿಪಿ ಇಲ್ಲ ಎಂಬ ಕೊರತೆಯನ್ನು ನಾವು ನೀಗಿಸಿದ್ದೇವೆ ಎಂದು ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು.
ಅವರು ಕಚೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ನೂತನ ಬ್ಯಾರಿ ಲಿಪಿ ಕಲಿಕಾ ವಿಧಾನ: ಭಾಗ-2’ ಡಿವಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಿವಿಡಿ ಬಿಡುಗಡೆಗೊಳಿಸಿ ಮಾತನಾಡಿದರು. ಬ್ಯಾರಿ ಭಾಷೆಗೆ 1,400 ವರ್ಷಗಳ ಇತಿಹಾಸ ಇದೆ. ಬ್ಯಾರಿ ಭಾಷೆಯಲ್ಲಿ ಈಗಾಗಲೇ ಲಿಪಿಯನ್ನು ಹಾಗೂ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಗಿದೆ. ಬ್ಯಾರಿ ಭಾಷೆಯ ಲಿಪಿಯನ್ನು ಜನರು ಸುಲಭವಾಗಿ ಕಲಿಯಬೇಕೆಂದು ಬ್ಯಾರಿ ಲಿಪಿ ಕಲಿಕಾ ವಿಧಾನದ ಮೊದಲ ಭಾಗದ ಡಿವಿಡಿಯನ್ನು ಬಿಡುಗಡೆಗೊಳಿಸಲಾಗಿದೆ. ಅದರಲ್ಲಿ ಸ್ವರಾಕ್ಷರ, ವ್ಯಂಜನಾಕ್ಷರ ಹಾಗೂ ಸಂಖ್ಯೆಗಳು ಕೂಡ ಇದೆ. ಒತ್ತಕ್ಷರಗಳು ಹಾಗೂ ಕಾಗುಣಿತಗಳು ಇರುವಂತಹ ಎರಡನೇ ಭಾಗದ ಡಿವಿಡಿಯನ್ನು ನಾವು ಬಿಡುಗಡೆಗೊಳಿಸಿದ್ದೇವೆ ಎಂದರು. ಬ್ಯಾರಿ ಭಾಷೆಗೆ ಶ್ರೀಮಂತಿಕೆಯನ್ನು ಕೊಡುವ ಪ್ರಯತ್ನವನ್ನು ಅಕಾಡೆಮಿ ಮಾಡಿದೆ. ಒಂದು ಭಾಷೆಗೆ ಲಿಪಿ ಇದ್ದರೆ ಭಾಷೆಗೆ ಇರುವಂತಹ ಪ್ರಾಮುಖ್ಯತೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಗೊತ್ತಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು. ಬ್ಯಾರಿ ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ, ರೂಪೇಶ್ ಉಚ್ಚಿಲ್, ನಫೀಸತ್ ಮಿಸ್ರಿಯಾ ಉಪಸ್ಥಿತರಿದ್ದರು.