(ನ್ಯೂಸ್ ಕಡಬ) newskadaba.com ಉಡುಪಿ, ಜ. 27. ಬೈಕಿನಲ್ಲಿ ತೆರಳುತ್ತಿದ್ದ ತಾಯಿ ಹಾಗೂ ಮಗನನ್ನು ತಪಾಸಣೆ ನೆಪದಲ್ಲಿ ಥಳಿಸಿದ ಅಮಾನವೀಯ ಘಟನೆ ಇಲ್ಲಿನ ಕೋಟ ಎಂಬಲ್ಲಿ ನಡೆದಿದೆ.
ಪ್ರಶಾಂತ್ ಎಂಬವರು, ಕೋಟ ಮೂರು ಕೈ ರಸ್ತೆಯಲ್ಲಿ ಸಾಯ್ಬರ ಕಟ್ಟೆಗೆಂದು ತಾಯಿ ಶಾರದಾ ಅವರನ್ನು ತನ್ನು ಬೈಕ್ ನಲ್ಲಿ ಕೂರಿಸಿಕೊಂಡು ತೆರಳುತ್ತಿದ್ದ ವೇಳೆ ಕರ್ತವ್ಯದಲ್ಲಿದ್ದ ಕೋಟ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಬಿ.ಪಿ. ಮತ್ತು ಸ್ಟೇಶನ್ ಎಸ್ ಬಿ ರಾಜು ಎಂಬವರು ತಪಾಸಣೆಯ ನೆಪದಲ್ಲಿ ಪ್ರಶಾಂತ್ ಅವರ ಬೈಕ್ ತಡೆದು ದಾಖಲೆ ಕೇಳಿದ್ದಾರೆ. ಒರಿಜಿನಲ್ ದಾಖಲೆ ಮನೆಯಲ್ಲಿದ್ದುದ್ದರಿಂದ ದಾಖಲೆಯ ಝೆರಾಕ್ಸ್ ಪ್ರತಿಯನ್ನು ಪೊಲೀಸರಿಗೆ ನೀಡಿದ್ದರು. ಇದರಿಂದ ಕೋಪಗೊಂಡ ಪೊಲೀಸರು ಪ್ರಶಾಂತ್ ಗೆ ಅವಾಚ್ಯ ಮಾತುಗಳಿಂದ ನಿಂದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನೆಪದಲ್ಲಿ ಪ್ರಶಾಂತ್ ಮೇಲೆ ಕೋಟ ಎಸ್.ಐ ಕೈ ಮಾಡಿದ್ದು ಇಬ್ಬರು ಪೊಲೀಸರು ಸೇರಿ ಥಳಿಸಿದ್ದಾರೆ. ಇದನ್ನು ತಡೆಯಲೆತ್ನಿಸಿದ ತಾಯಿ ಶಾರದಾ ಅವರಿಗೂ ಬೆತ್ತದಿಂದ ಪೆಟ್ಟು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಗನನ್ನು ಅರೆಸ್ಟ್ ಮಾಡಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಇತ್ತ ಪೊಲೀಸರಿಂದ ಥಳಿಸಿಕೊಂಡ ಶಾರದಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಚಾರವಾಗಿ ತಾಯಿ ಶಾರದಾ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗಿದ್ದಾರೆ.