ಮಂಗಳೂರು: ಪ್ರಜಾಪ್ರಭುತ್ವದ ಆಶಯಗಳನ್ನು ಗೌರವಿಸಿ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರವಾಗಿದ್ದು, ಸಮಾನತೆ ಸಾಮಾಜಿಕ  ನ್ಯಾಯ ಮತ್ತು ಸ್ವತಂತ್ರತೆ ಎಂಬ ಮೂರು ತತ್ವಗಳ  ಭದ್ರ ಅಡಿಪಾಯವನ್ನು ಹೊಂದಿದೆ. ಈ ಸಂವಿಧಾನದ ಮೂಲ ಆಶಯಗಳಿಗೆ  ಧಕ್ಕೆ ಬರದಂತೆ  ನಾವೆಲ್ಲ ಕೆಲಸ ಮಾಡಿ ದೇಶದ ಪ್ರಗತಿಗೆ ಕಟಿಬದ್ಧರಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳೇ ನಡೆಸುವ ಈ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಈ ದಿನ ನಾವೆಲ್ಲ ನಮ್ಮ ತಪ್ಪು ಒಪ್ಪುಗಳನ್ನು ವಿಮರ್ಶಿಸಿ  ಸಿಂಹಾವಲೋಕನ ಮಾಡಿ, ದೇಶಕ್ಕಾಗಿ ನಮ್ಮನ್ನು  ಮಗದೊಮ್ಮೆ  ಸಮರ್ಪಿಸಿಕೊಳ್ಳೋಣ ಎಂದು ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ಅಭಿಪ್ರಾಯಪಟ್ಟರು.

ಮೇರಿಹಿಲ್‍ ನಲ್ಲಿರುವ ಗೃಹರಕ್ಷಕ ದಳ ಕಛೇರಿಯಲ್ಲಿ ಮಂಗಳವಾರ ಬೆಳಗ್ಗೆ 7.15ಕ್ಕೆ ಧ್ವಜಾರೋಹಣ ನಡೆಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಗುರುರಾಜ್ ಯಂ. ಐಷರ್ ಡೀಲರ್, ಪಿಎಸ್.ಎನ್. ಆಟೋಮೊಟಿವ್ ಮಾರ್ಕೆಟಿಂಗ್‍ ನ ಸೀನಿಯರ್ ಸರ್ವಿಸ್ ಮೇನೇಜರ್ ಇವರು  ಮಾತನಾಡುತ್ತಾ, ಸಂವಿಧಾನದ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಗೃಹರಕ್ಷಕರು ಮತ್ತು ಪೊಲೀಸರ ಪಾತ್ರ ಹಿರಿದಾಗಿದೆ. ಸಾರ್ವಜನಕರು ಕಾರ್ಯಾಂಗ, ನ್ಯಾಯಾಂಗ ಮತ್ತು  ಶಾಸಕಾಂಗದ ಜೊತೆ ಕೈಜೋಡಿಸಿದರೆ  ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ನುಡಿದರು. ಈ ಸಂದರ್ಭ ಕುಮಾರಿ ನಿಧಿ ಜಿ. ಅವರು ಮಾತನಾಡಿ ಎಲ್ಲರಿಗೂ ಸ್ವತಂತ್ರವಾಗಿ ಜೀವಿಸಲು ಹಾಗೂ ಶಿಕ್ಷಣ ಪಡೆಯಲು ಅವಕಾಶ ನೀಡಿದ ಇಂತಹ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಎಲ್ಲಾ ಹಿರಿಯರನ್ನು ಸ್ಮರಿಸುತ್ತೇನೆ ಎಂದರು.  ಈ ಸಂದರ್ಭ ಕಚೇರಿ ಪ್ರಥಮ ದರ್ಜೆ ಸಹಾಯಕರಾದ ಅನಿತಾ ಟಿ.ಎಸ್., ಮಂಗಳೂರು ಘಟಕದ ಘಟಕಾಧಿಕಾರಿಯಾದ ಮಾರ್ಕ್ ಶೇರ್, ಪುತ್ತೂರು ಘಟಕಾಧಿಕಾರಿ, ಅಭಿಮನ್ಯು ರೈ, ಹಿರಿಯ ಗೃಹರಕ್ಷಕರಾದ ರಮೇಶ್ ಭಂಡಾರಿ, ಸುನಿಲ್ ಕುಮಾರ್ ಹಾಗೂ ಗೃಹರಕ್ಷಕ/ಗೃಹರಕ್ಷಕಿಯರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Also Read  ಮಾಜಿ ಸಚಿವ ಟಿ. ಜಾನ್ ವಿಧಿವಶ​

error: Content is protected !!
Scroll to Top