➤➤ ವಿಶೇಷ ಲೇಖನ ರಾಷ್ಟ್ರಧ್ವಜ -ನಿಮಗೆಷ್ಟು ಗೊತ್ತು? ✍️ ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಜ. 25. ಪ್ರತಿ ದೇಶವು ತಮ್ಮದೇ ಆದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನ ಹೊಂದಿದೆ. ನಮ್ಮ ಭಾರತ ದೇಶವೂ ಅದಕ್ಕೆ ಹೊರತಲ್ಲ. ನಮ್ಮ ರಾಷ್ಟ್ರಗೀತೆ ಜನಗಣಮನ, ರಾಷ್ಟ್ರ ಲಾಂಛನ ಅಶೋಕಚಕ್ರ ಮತ್ತು ರಾಷ್ಟ್ರಧ್ವಜ ಕೇಸರಿ, ಬಿಳಿ, ಹಸಿರು ಬಣ್ಣದಿಂದ ಕೂಡಿದ ತ್ರಿವರ್ಣ ಪತಾಕೆ ಆಗಿರುತ್ತದೆ. ರಾಷ್ಟ್ರಧ್ವಜ ಎನ್ನುವುದು ಸಾರ್ವಭೌಮತ್ವದ ಸಂಕೇತವಾಗಿದ್ದು, ಎಲ್ಲರೂ ಅದನ್ನು ಗೌರವಿಸಲೇಬೇಕು. ರಾಷ್ಟ್ರಧ್ವಜಕ್ಕೆ ಅಪಮಾನವಾದರೆ ದೇಶಕ್ಕೆ ಅಪಮಾನವಾದಂತೆ, ಅವಮಾನ ಮಾಡಿದವರು ದೇಶದ್ರೋಹಿಯಾಗುತ್ತಾನೆ. ನಮ್ಮ ಭಾರತದ ರಾಷ್ಟ್ರಧ್ವಜವನ್ನು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದ ಸಮಿತಿ ವಿನ್ಯಾಸಗೊಳಿಸಿತ್ತು. 1947ನೇ ಜುಲೈ 22 ರಂದು ರಾಷ್ಟ್ರಧ್ವಜ ಅಂಗೀಕರಿಸಲ್ಪಟ್ಟಿತ್ತು.

(1) ನಮ್ಮ ರಾಷ್ಟ್ರಧ್ವಜದಲ್ಲಿರುವ ಬಣ್ಣಗಳು, ಕೇಸರಿ, ಬಿಳಿ ಮತ್ತು ಹಸಿರು ಇವುಗಳು ಸಮಾನ ಪ್ರಮಾಣದಲ್ಲಿ ಇದ್ದು, ಅಡ್ಡದಾಗಿ ರಚಿಸಲ್ಪಟ್ಟ ತ್ರಿವರ್ಣ ಪತಾಕೆಯಾಗಿರುತ್ತದೆ. ಮೇಲ್ಬಾಗದ ಕೇಸರಿ ಬಣ್ಣ ಶೌರ್ಯ ಮತ್ತು ತ್ಯಾಗವನ್ನು, ಶ್ವೇತ ಬಣ್ಣ ಸತ್ಯ ಮತ್ತು ಶಾಂತಿಯನ್ನು, ಕೆಳಗಿನ ಹಸಿರು ಬಣ್ಣ ಸಮೃದ್ಧಿಯ ಸಂಕೇತವಾಗಿದೆ.
(2) ರಾಷ್ಟ್ರಧ್ವಜವನ್ನು ಅರಳಿಸುವಾಗ ಮೇಲೆ ಕೇಸರಿ, ಮಧ್ಯದ್ದು ಬಿಳಿ ಮತ್ತು ಕೆಳಗಡೆ ಹಸಿರು ಬಣ್ಣವಿರಬೇಕು. ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಬಾರದು.
(3) ರಾಷ್ಟ್ರಧ್ವಜದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದ್ದು, ಅದರಲ್ಲ್ಲಿ 24 ಅರಗಳುಳ್ಳ ಚಕ್ರವಿದೆ. ಇದು ಪ್ರಗತಿಯನ್ನು ಸೂಚಿಸುತ್ತದೆ. ಚಕ್ರದ ವ್ಯಾಸವು ಬಿಳಿ ಬಣ್ಣದ ಪಟ್ಟಿಯ ಅಗಲದಷ್ಟೇ ಇರುತ್ತದೆ.
(4) ರಾಷ್ಟ್ರಧ್ವಜದ ಉದ್ದವು, ಅದರ ಅಗಲದ ಮೂರನೇ ಎರಡು ಭಾಗದಷ್ಟು ಇರಬೇಕು, ಧ್ವಜ ಪತಾಕೆ ಆಯತಾಕಾರದಲ್ಲಿದ್ದು, ಉದ್ದ ಅಗಲದ ಪ್ರಮಾಣ 3:2 ಹಾಗೂ 9:6 ರ ಅನುಪಾತ ಕ್ರಮದಲ್ಲಿ ಇರುತ್ತದೆ.
(5) ರಾಷ್ಟ್ರಧ್ವಜವನ್ನು ಹತ್ತಿ ಬಟ್ಟೆ ಅಥಾ ರೇಷ್ಮೆ ಬಟ್ಟೆಯಲ್ಲಿ ಮಾತ್ರ ಮಾಡಲಾಗುತ್ತದೆ. ಅದರ ದಾರ ಕೈಯಿಂದಲೇ ಮಾಡಿದ್ದಾಗಿರುತ್ತದೆ.
(6) ರಾಷ್ಟ್ರಧ್ವಜವನ್ನು ಯಾರು ಹೇಗೆ ಬೇಕಾದ ಹಾಗೆ ತಯಾರಿಸುವಂತಿಲ್ಲ. ಅದಕ್ಕೆ ನಿರ್ದಿಷ್ಟ ನೀತಿ ನಿಯಮಗಳಿದೆ. ನೀತಿ ಸಂಹಿತೆಗಳಿದೆ. ಮಹಾರಾಷ್ಟ್ರದ ಉದಗಿರಿ, ತಮಿಳುನಾಡಿನ ತಿರುಪೇರಿ, ಕರ್ನಾಟಕದ ಗದಗದಲ್ಲಿ ಗ್ರಾಮೋದ್ಯೋಗ ಸಂಘದವರು ತಾವು ಸಿದ್ದಪಡಿಸಿದ ಖಾದಿ ಬಟ್ಟೆಯಿಂದ ಧ್ವಜಗಳನ್ನು ತಯಾರಿಸುತ್ತಾರೆ.
(7) ರಾಷ್ಟ್ರಧ್ವಜ ಹರಿದುಹೋದರೆ ಅಥವಾ ಉಪಯೋಗಕ್ಕೆ ಬಾರದಂತಾದರೆ ಅದನ್ನು ಬೇರೆ ರೀತಿಯಲ್ಲಿ ಬಳಸುಂತಿಲ್ಲ.

(8) ರಾಷ್ಟ್ರಧ್ವಜವನ್ನು ಸ್ಥಂಭದ ಮಧ್ಯದಲ್ಲಿರುವಂತೆ ಹಾರಿಸಬಾರದು ಕಂಬದ ತುತ್ತ ತುದಿಯಲ್ಲಿಯೇ ಹಾರಿಸಬೇಕು.
(9) ಶೋಕಸೂಚಕ ದಿನಗಳಲ್ಲಿ ರಾಷ್ಟ್ರಧ್ವಜವನ್ನು ತುತ್ತ ತುದಿಯಲ್ಲಿ ಹಾರಿಸಿದ ಬಳಿಕ ಕೆಳಗಿಳಿಸಿ ಅದನ್ನು ಅರ್ಧ ಮಟ್ಟದಲ್ಲಿ ಹಾರಲು ಬಿಡಬೇಕು.
(10) ಇತರ ಧ್ವಜಗಳನ್ನು ರಾಷ್ಟ್ರಧ್ವಜಕ್ಕೆ ಎಡಭಾಗದಲ್ಲಿಯೇ ಹಾರಿಸಬೇಕು. ಇತರ ಧ್ವಜಗಳಿಗಿಂತ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಬೇಕು.
(11) ರಾಷ್ಟ್ರ ಧ್ವಜವನ್ನು ಮೇಲೇರಿಸುವಾಗ ತ್ವರಿತವಾಗಿ, ಕೆಳಗಿಳಿಸುವಾಗ ನಿಧಾನವಾಗಿಯೂ ಇಳಿಸಬೇಕು.
(12) ರಾಷ್ಟ್ರ ಧ್ವಜವನ್ನು ಪವಿತ್ರವೆಂದು ಭಾವಿಸಬೇಕು. ಗೌರವಿಸಬೇಕು ಮತ್ತು ಜೋಪಾನ ಮಾಡಬೇಕು. ರಾಷ್ಟ್ರಧ್ವಜವನ್ನು ಇತರ ಬಟ್ಟೆಗಳಂತೆ ಆಲಂಕಾರಿಕ ಬಟ್ಟೆಯಾಗಿ ಅಥವಾ ಅದನ್ನು ಹೊದಿಕೆಯಾಗಿ ಬಳಸುವಂತಿಲ್ಲ.
(13) ರಾಷ್ಟ್ರಧ್ವಜದಲ್ಲಿ ಬೇರೆ ಗುರುತುಗಳನ್ನು ಅಥವಾ ಅಕ್ಷರಗಳನ್ನು ಬರೆಯಬಾರದು.
(14) ರಾಷ್ಟ್ರಧ್ವಜವನ್ನು ಸೂರ್ಯೋದಯದ ನಂತರ ಹಾಗೂ ಸೂರ್ಯಾಸ್ತಮಾನದ ಒಳಗೆ ಹಾರಿಸಬೇಕು.
(15) ಧ್ವಜವನ್ನು ಬಿಡಿಸಿರುವಂತೆಯೇ ಕಟ್ಟಿ ಸ್ಥಂಭದ ಬುಡದಿಂದ ಮೇಲಕ್ಕೆ ತೀವ್ರವಾಗಿ ಕೊಂಡು ಹೋಗಿ ಹಾರಿಸುವುದಕ್ಕೆ ‘ಧ್ವಜ ಏರಿಸುವುದು’ ಎನ್ನುತ್ತಾರೆ. ಕಂಬದ ತುದಿಯಲ್ಲಿ ಮೊದಲೇ ಕ್ರಮಬದ್ದವಾದ ರೀತಿಯಲ್ಲಿ ಕಟ್ಟಿ ಇಟ್ಟು ವಿಧಿಪೂರ್ವಕವಾಗಿ ಬಿಡಿಸುವುದನ್ನು “ಧ್ವಜ ಅರಳಿಸುವುದು” ಎಂದು ಕರೆಯುತ್ತಾರೆ. ಧ್ವಜ ಏರಿಸುವಾಗಿ ಮತ್ತು ಅರಳಿಸುವಾಗ ನಾವು ನೆಟ್ಟಗೆ ನಿಂತುಕೊಂಡು, ಪತಾಕೆ ಏರಿಸಿದ ಅಥವಾ ಅರಳಿಸಿದ ಬಳಿಕ ಬಲಗೈಯಿಂದ ಸೆಲ್ಯೂಟ್ ನೀಡಬೇಕು.


ಡಾ|| ಮುರಲೀಮೋಹನ್ ಚೂಂತಾರು
ಸಮಾದೇಷ್ಟರು
ಜಿಲ್ಲಾ ಗೃಹರಕ್ಷಕ ದಳ, ಮಂಗಳೂರು

 

error: Content is protected !!

Join the Group

Join WhatsApp Group