ಕಡಬ: ಅಪಘಾತ ಗಾಯಾಳುವನ್ನು ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದ ಸರ್ಕಲ್ ಇನ್ಸ್‌ಪೆಕ್ಟರ್ ➤ ಉಮೇಶ್ ಉಪ್ಪಳಿಕೆಯವರ ಮಾನವೀಯ ಕಾರ್ಯಕ್ಕೆ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಜ.24. ಅಪಘಾತದ ಗಾಯಾಳುವನ್ನು ತನ್ನದೇ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಮಾನವೀಯತೆ ಮೆರೆದಿದ್ದಾರೆ.

ಕಡಬದಲ್ಲಿ ಸಚಿವ ಅಂಗಾರರಿಗೆ ಅಭಿನಂದನಾ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಪದವು ಎಂಬಲ್ಲಿ ರಿಟ್ಝ್ ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿದ್ದರು. ಮೂವರನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಉಳಿದ ಓರ್ವ ಮಹಿಳೆಯನ್ನು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆಯವರು ಪೊಲೀಸ್ ವಾಹನದಲ್ಲಿ ಉಪ್ಪಿನಂಗಡಿ ವರೆಗೆ ಕರೆದೊಯ್ದಿದ್ದು, ಆ ಬಳಿಕ ಉಪ್ಪಿನಂಗಡಿ ಠಾಣಾ ಉಪ ನಿರೀಕ್ಷಕರ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಚಿವರ ಕಾರ್ಯಕ್ರಮಕ್ಕೆ ತೆರಳುತ್ತಿರುವುದರ ನಡುವೆಯೂ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದ ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆಯವರ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಕಡಬ ಠಾಣಾ ಎಸ್ಐ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

error: Content is protected !!

Join the Group

Join WhatsApp Group