(ನ್ಯೂಸ್ ಕಡಬ) newskadaba.com ಸುಬ್ರಮಣ್ಯ, ಜ. 23. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ 11ನೇ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಮುಜರಾಯಿ ದೇವಸ್ಥಾನಗಳಲ್ಲಿ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ತಿಂಗಳಿಗೆ ಎರಡು ಸಲ ಸಪ್ತಪದಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಫೆಬ್ರವರಿ ತಿಂಗಳ 17 ಮತ್ತು 25ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹ ಆಯೋಜಿಸಲಾಗುವುದು. ಆ ಬಳಿಕ ಆಯಾ ತಿಂಗಳ ಮುಹೂರ್ತ ನೋಡಿಕೊಂಡು ಆಯಾ ಜಿಲ್ಲೆಗಳ ಜನರ ಸಂಪ್ರದಾಯ, ಪರಂಪರೆಗೆ ಅನುಗುಣವಾಗಿ ಸಪ್ತಪದಿ ಕಾರ್ಯಕ್ರಮ ನಡೆಸಲಾಗುವುದು. ಯಾವುದೇ ದೇವಸ್ಥಾನದವರು ಅಥವಾ ಜಿಲ್ಲೆಯವರು ಮುಂದೆ ಬಂದರೆ ಅವರು ಹೇಳಿದ ದಿನಾಂಕದಂದೇ ಸಪ್ತಪದಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಲಾಗುವುದು ಎಂದರು.