(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.21. ಇಲ್ಲಿನ 6ನೇ ವಾರ್ಡ್ ಮಠದ ಹಿರ್ತಡ್ಕ ಎಂಬಲ್ಲಿ ಕುಡಿಯುವ ನೀರಿನ ಟ್ಯಾಂಕಿಯಲ್ಲಿ ನೀರು ಕಲುಷಿತವಾಗಿದೆ ಎಂಬ ದೂರಿನನ್ವಯ ನೂತನ ಪಂಚಾಯತ್ ಸದಸ್ಯ ರಶೀದ್ ಮಠರವರ ನೇತೃತ್ವದಲ್ಲಿ ಮೂರು ದಿನಗಳ ಹಿಂದೆ ಪರಿಶೀಲನೆ ನಡೆಸಿ ಸ್ವಚ್ಛಗೊಳಿಸುವುದಾಗಿ ಊರವರಿಗೆ ಭರವಸೆ ಕೂಟ್ಟಿದ್ದು, ವಾರದೊಳಗೆ ನೀಡಿದ ಭರವಸೆಯನ್ನು ಪೂರೈಸುವ ಹಠದೊಂದಿಗೆ ರಶೀದ್ ಮಠರವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ನೀರಿನ ಟ್ಯಾಂಕನ್ನು ತೊಳೆದು ಸ್ವಚ್ಛಗೊಳಿಸಿದ್ದಾರೆ.
ಈ ಸಂಧರ್ಭದಲ್ಲಿ ಟ್ಯಾಂಕಿಯಲ್ಲಿರುವ ಕೆಸರು, ಕಸ ಕಡ್ಡಿಗಳು ಮತ್ತು ಹಲ್ಲಿಗಳನ್ನು ಕಂಡು ಒಂದು ಕ್ಷಣ ದಂಗಾಗಿ ಬಿಟ್ಟರು. ಈ ನೀರನ್ನೇ ಕುಡಿಯಲು ಬಳಸುತ್ತಿದ್ದ ಊರವರ ಆರೋಗ್ಯದ ಬಗ್ಗೆ ಮತ್ತು ವರ್ಷಗಳ ಕಾಲ ಆಡಳಿತ ನಡೆಸಿ ಇಂತಹ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸದ ಆಡಳಿತ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲವನ್ನೂ ಸ್ವಚ್ಛಗೊಳಿಸಿ ನೀರನ್ನು ಮತ್ತೆ ತುಂಬಿಸಿಕೊಡಲಾಯಿತು. ಈ ಸಂಧರ್ಭ ಎಸ್ಡಿಪಿಐ ಬೆಂಬಲಿತ ನೂತನ ಪಂಚಾಯತ್ ಸದಸ್ಯರಾದ ನೆಬಿಸ ಇಲ್ಯಾಸ್ ಮತ್ತು ಸೌಧ ಮುಸ್ತಫಾರವರು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಸ್ಡಿಪಿಐ ಪಕ್ಷದ ಮತ್ತು ನೂತನ ಪಂಚಾಯತ್ ಸದಸ್ಯರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.