(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಮಂಗಳೂರು ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಹಾಗೂ ಗೇರು ಬೆಳೆಯಲ್ಲಿ ಕೀಟ ನಿಯಂತ್ರಣ ಮಾಡುವ ಬಗ್ಗೆ ಮಾಹಿತಿ ತೆಂಗು ಬೆಳೆಯಲ್ಲಿ ನುಸಿ ಕೀಟಗಳು ಉಂಟಾದಾಗ ಎಳೆಯ ಕಾಯಿಗಳ ಮೇಲೆ ತೊಟ್ಟಿನ ಕೆಳಭಾಗದಲ್ಲಿ ರಸವನ್ನು ಹೀರುತ್ತವೆ. ಕಾಯಿ ಬೆಳೆದು ದಪ್ಪವಾದಂತೆಲ್ಲಾ ತೊಟ್ಟಿನ ಒಳಗಿನಿಂದ ತ್ರಿಕೋಣಾಕಾರದ ಬಿಳಿ ಮಚ್ಚೆಗಳು ಕಾಣಿಸುತ್ತವೆ. ನಂತರ ಕಾಯಿಗಳ ಮೇಲೆ ಕಂದು ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ಅದೇ ಜಾಗದಲ್ಲಿ ಉದ್ದನೆಯ ಬಿರುಕುಗಳು ಉಂಟಾಗುತ್ತವೆ. ಈ ಬಿರುಕುಗಳಿಂದ ಅಂಟು ಪದಾರ್ಥ ಹೊರಬರುತ್ತವೆ. ಬಾಧೆಗೊಳಗಾದ ಎಳೆ ಕಾಯಿಗಳು ಉದುರುತ್ತವೆ.
ಈ ಸಂದರ್ಭದಲ್ಲಿ ನೀರಿನಲ್ಲಿ ಕರಗುವ ಗಂಧಕ 5 ಗ್ರಾಂ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಕಾಯಿಗೊಂಚಲಿಗೆ ಸಿಂಪಡಿಸಲು ಈ ತಿಂಗಳು ಸೂಕ್ತವಾಗಿದೆ ಇದರಿಂದ ತೆಂಗು ಬೆಳೆಯಲ್ಲಿ ನುಸಿ ಕೀಟಗಳ ನಿರ್ವಹಣೆ ಮಾಡಬಹುದಾಗಿರುತ್ತದೆ. ಗೇರು ಬೆಳೆಯಲ್ಲಿ ಟೀ ಸೊಳ್ಳೆಗಳ ಉತ್ಪತ್ತಿಯಾದಾಗ ಟೀ ಸೊಳ್ಳೆ ಎಲೆಗಳು, ಹೂವುಗಳು, ಹಣ್ಣುಗಳು ಮತ್ತು ಬೀಜಗಳಿಂದ ರಸ ಹೀರುತ್ತವೆ. ಇದರಿಂದ ಎಲೆಗಳು ಮುರುಟಾಗುವುದು, ರೆಂಬೆಗಳು ಮತ್ತು ಹೂವುಗಳು ಒಣಗುತ್ತವೆ. ಬೀಜಗಳು ಮುರುಟಾಗುತ್ತವೆ ಮತ್ತು ಅವುಗಳ ಮೇಲೆ ಕಜ್ಜಿಯಂತಹ ಚುಕ್ಕೆಗಳಾಗುತ್ತವೆ. ಗೇರು ಬೆಳೆಯಲ್ಲಿ ಟೀ ಸೊಳ್ಳೆಗಳ ನಿರ್ವಹಣೆಗೆ ಲ್ಯಾಂಬ್ಡಸೈಲೋಥ್ರಿನ್ 1 ಮಿ.ಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ರಿಶಲ್ ಡಿಸೋಜ, ತೋಟಗಾರಿಕೆ ವಿಷಯತಜ್ಞರು, ಮಂಗಳೂರು ದೂರವಾಣಿ ಸಂಖ್ಯೆ: 8277806372 ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.