➤➤ವಿಶೇಷ ಲೇಖನ ರಸ್ತೆ ನಿಯಮಗಳನ್ನು ಪಾಲಿಸಿ, ಜೀವ ಉಳಿಸಿಕೊಳ್ಳಿ ✍✍ ಡಾ. ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com . 20. ಪ್ರತಿವರ್ಷ ಜನವರಿ ತಿಂಗಳಲ್ಲಿ  11 ರಿಂದ 17 ರವರೆಗೆ  ರಸ್ತೆ ಸುರಕ್ಷಾ ಸಪ್ತಾಹ ಆಚರಿಸಿ ಜನರಲ್ಲಿ ರಸ್ತೆ ಸುರಕ್ಷತೆ  ಬಗ್ಗೆ  ಜಾಗೃತಿ ಮಾಡಿಸಲಾಗುತ್ತಿದೆ.  ಜನವರಿ 11 ರಂದು ರಾಷ್ಟ್ರದಾದ್ಯಂತ ‘ರಸ್ತೆ ಸುರಕ್ಷತಾ ದಿನ’ ಎಂದು ಆಚರಿಸಿ  ಜನರಲ್ಲಿ  ರಸ್ತೆ ಸುರಕ್ಷತೆಗೆ ಆದ್ಯತೆ ನೀಡುವಂತೆ ಪ್ರೇರೇಪಿಸಲಾಗುತ್ತಿದೆ.  ಆದರೆ  ಈ ಬಾರಿ  ಭಾರತ ಸರ್ಕಾರ  ಅಧೀನದಲ್ಲಿರುವ  ರಾಷ್ಟ್ರೀಯ ಹೆದ್ದಾರಿ  ಮತ್ತು ಸಂಚಾರ ಮಂತ್ರಾಲಯ  ಇದರ ಆದೇಶದಂತೆ  ರಸ್ತೆ ಸುರಕ್ಷತಾ ಸಪ್ತಾಹದ ಜೊತೆಗೆ ರಸ್ತೆ ಸುರಕ್ಷಾ  ತಿಂಗಳು ಎಂದು  ಜನವರಿ 18 ರಿಂದ ಫೆಬ್ರವರಿ 17 ರ ವರೆಗೆ  ಆಚರಣೆ ನಡೆಯಲಿದೆ.  ರಾಷ್ಟ್ರೀಯ ಸುರಕ್ಷತಾ ಪರಿಷತ್ತು  ಇದರ  ವತಿಯಿಂದ ಈ ಸಪ್ತಾಹ ಮತ್ತು  ಮಾಸಿಕ  ಆಚರಣೆ ನಡೆಯುತ್ತಿದೆ. 1988 ರಲ್ಲಿ ಈ ರಸ್ತೆ ಸುರಕ್ಷಾ ಸಪ್ತಾಹ  ಆರಂಭವಾಗಿದ್ದು, 2021 ರ ಆಚರಣೆ 32ನೇ ರಸ್ತೆ ಸುರಕ್ಷಾ ಸಪ್ತಾಹ ಆಗಿರುತ್ತದೆ.  2021ರ ಧ್ಯೇಯ ವಾಕ್ಯ “ ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು  ಕುಟುಂಬವನ್ನು ರಕ್ಷಿಸಿ” ಎಂಬುದಾಗಿದೆ. ಅಂಕಿ ಅಂಶಗಳ ಪ್ರಕಾರ 2018 ರಲ್ಲಿ  ಸುಮಾರು 1,50,000  ಮಂದಿ  ರಸ್ತೆ  ಅಫಘಾತದಿಂದ ಮೃತಪಟ್ಟಿರುತ್ತಾರೆ. 2017 ರಲ್ಲಿ 1,35,000 ಮಂದಿ ರಸ್ತೆ ಅಫಘಾತದಲ್ಲಿ ಸಾವನ್ನಪ್ಪಿದ್ದರು. 2020ರ ವೇಳೆ ಈ ಸಂಖ್ಯೆ 1,60,000 ತಲುಪಿದರೆ  ಆಶ್ಚರ್ಯವೇನಿಲ್ಲ. ವಿಶ್ವದಲ್ಲಿನ ವಾಹನ ಸಂಖ್ಯೆಗೆ ನಮ್ಮ ಭಾರತದ ಪಾಲು ಕೇವಲ 2 ಶೇಕಡಾ  ಇದ್ದರೂ,  ರಸ್ತೆ ಅಫಘಾತಗಳ ಸಾವಿಗೆ ನಮ್ಮ ಭಾರತದ  ಕಾಣಿಕೆ  11 ಶೇಕಡಾ  ಆಗಿರುವುದು  ಬಹಳ  ಸೋಜಿಗದ ಸಂಗತಿ. ಈ ಅಂಕಿ-ಅಂಶಗಳಿಂದ ಭಾರತದಲ್ಲಿ ಎರಡು ವಿಚಾರಗಳು ಸ್ಪಷ್ಟವಾಗುತ್ತದೆ. ಒಂದು ರಸ್ತೆಯ  ನಿರ್ಮಾಣ ಮತ್ತು  ನಿರ್ವಹಣೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಎರಡನೆಯದಾಗಿ ನಾವೆಲ್ಲರೂ ರಸ್ತೆ ಸುರಕ್ಷತಾ  ನಿಯಮಗಳನ್ನು  ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವುದು ಖೇದಕರ ಸಂಗತಿ. ಈ ಕಾರಣದಿಂದಾಗಿ  ನಾವೆಲ್ಲಾ ರಸ್ತೆ ಸುರಕ್ಷತಾ  ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಲೇಬೇಕಾಗಿದೆ. 2021ನೇ ಇಸವಿಯ ರಸ್ತೆ ಸುರಕ್ಷಾ ಮಾಸಿಕ  ಆಚರಣೆಯ ಘೋಷವಾಕ್ಯ “ಸಡಕ್ ಸುರಕ್ಷಾ- ಜೀವನ್ ರಕ್ಷಾ” ಆಗಿರುತ್ತದೆ. ಇದರ ಆಶಯ “ರಸ್ತೆ ಸುರಕ್ಷಾ ನಿಯಮಗಳನ್ನು  ಪಾಲಿಸಿ, ಜೀವವನ್ನು ರಕ್ಷಿಸಿಕೊಳ್ಳಿ ಎಂಬುದಾಗಿದೆ.

Also Read  ➤➤ ಉದ್ಯೋಗ ಮಾಹಿತಿ ಯುಕೆ ನಲ್ಲಿ ಶುಶ್ರೂಷಕರ ನೇಮಕಕ್ಕೆ ಅರ್ಜಿ ಆಹ್ವಾನ

ಏನಿದು ರಸ್ತೆ ಸುರಕ್ಷಾ ನಿಯಮಗಳು?

ರಸ್ತೆ ಸುರಕ್ಷಾ ನಿಯಮಗಳನ್ನು ವಾಹನ ಚಾಲಕರು ಮತ್ತು ಪಾದಾಚಾರಿಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ರೂಪಿಸಲಾಗಿದೆ.  ರಸ್ತೆ ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ  ಪಾಲಿಸಿದಲ್ಲಿ  ಸಾವು ನೋವಿನ ಸಂಖ್ಯೆಯನ್ನು ನಿಯಂತ್ರಿಸಬಹುದು ಮತ್ತು ರಾಷ್ಟ್ರೀಯ ಮಾನವ ಸಂಪನ್ಮೂಲದ ಸೋರಿಕೆ ಆಗುವುದನ್ನು ತಪ್ಪಿಸಬಹುದು.

1)         ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಶೇಕಡಾ 50 ರಷ್ಟು ಅಫಘಾತಗಳಿಗೆ ಮುಖ್ಯ ಕಾರಣ  ಮದ್ಯಪಾನ ಎಂದು ಅಂಕಿಅಂಶಗಳಿಂದ  ತಿಳಿದು ಬಂದಿದೆ.

2)         ವಾಹನ ಚಾಲನೆ ಮಾಡುವಾಗ  ಎಲ್ಲರೂ  ಖಡ್ಡಾಯವಾಗಿ  ಸೀಟು ಬೆಲ್ಟು ಧರಿಸತಕ್ಕದ್ದು.

3)         ದ್ವಿಚಕ್ರ ವಾಹನ ಚಾಲಕರು ಮತ್ತು ಜೊತೆ ಪ್ರಯಾಣಿಕರು ಖಡ್ಡಾಯವಾಗಿ  ಶಿರ ಕವಚ ಧರಿಸತಕ್ಕದ್ದು.

4)         ವಾಹನ ಚಲಾಯಿಸುವಾಗ ನಿಮ್ಮ ಮುಂದಿನ ವಾಹನಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ

5)         ವಾಹನ ಚಲಾವಣೆ ಮಾಡುವಾಗ  ಯಾವುದೇ  ಕಾರಣಕ್ಕೆ ಮೊಬೈಲ್  ಬಳಸಬೇಡಿ.

6)         ವಾಹನ ಚಲಾವಣೆ ಮಾಡುವಾಗ ಧೂಮಪಾನ ಮಾಡುವುದು ನಿಮ್ಮ ಆರೋಗ್ಯಕ್ಕೆ ಮತ್ತು ಸಮಾಜದ  ಆರೋಗ್ಯಕ್ಕೆ  ಹಾನಿಕಾರಕ.

7)         ವಾಹನ ಚಲಾಯಿಸುವಾಗ ನಿಮ್ಮ ವೇಗದ ಮಿತಿಯನ್ನು ನಿಯಂತ್ರಣದಲ್ಲಿಡಿ. ಅವಸರವೇ ಅಫಘಾತಕ್ಕೆ  ಕಾರಣ

8)         ವಾಹನ ಚಲಾಯಿಸುವಾಗ ಯಾವತ್ತು ರಸ್ತೆಯ ಎಡಭಾಗದಲ್ಲಿ ಚಲಿಸಿ. ಬೇರೆ ವಾಹನಗಳು ನಿಮ್ಮನ್ನು  ದಾಟಿ ಮುಂದೆ  ಮುಂದೆ ಹೋಗಲು  ಬಲಭಾಗದಲ್ಲಿ  ಜಾಗವಿರಲಿ.

9)         ಕರ್ಕಶವಾದ ಹಾರ್ನ್‍ ಗಳನ್ನು ದಯವಿಟ್ಟು ಬಳಸಬೇಡಿ. ಅತೀ ಅಗತ್ಯವಿದ್ದಲ್ಲಿ ಮಾತ್ರ ಹಾರ್ನ್ ಬಳಸಿ. ಆದಷ್ಟು ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡಿ. ಆಸ್ಪತ್ರೆ, ಶಾಲೆಗಳ ಬಳಿ ಅನಾವಶ್ಯಕ ಹಾರ್ನ್ ಬಳಸುವುದು ಅಪರಾಧವಾಗಿರುತ್ತದೆ.

10)      ಇನ್ನೊಂದು ವಾಹನವನ್ನು ಹಿಂದಕ್ಕೆ ಹಾಕಿ ಮುಂದೆ ಹೋಗುವಾಗ ಬಲಭಾಗದಿಂದಲೇ  ಓವರ್‍ ಟೇಕ್ ಮಾಡಬೇಕು.

11)      ನಿಮ್ಮ ವಾಹನವನ್ನು ಇನ್ನೊಂದು ವಾಹನ ಓವರ್‍ ಟೇಕ್ ಮಾಡುತ್ತಿದ್ದಲ್ಲಿ ನಿಮ್ಮ ವಾಹನದ ವೇಗವನ್ನು  ಹೆಚ್ಚಿಸಬೇಡಿ  ನಿಮ್ಮ ವೇಗ ತಗ್ಗಿಸಿ, ಅವರನ್ನು ಮುಂದೆ ಹೋಗಲು  ಅವಕಾಶ ಮಾಡಿ. ಇನ್ನೊಂದು ವಾಹನ ನಿಮ್ಮ ವಾಹನವನ್ನು  ಓವರ್‍ ಟೇಕ್ ಮಾಡುವುದರಿಂದ ನಿಮ್ಮ ಶೌರ್ಯ, ಧೈರ್ಯ,  ಮತ್ತು ಪ್ರತಿಷ್ಠೆಗೆ ಯಾವ ಧಕ್ಕೆಯೂ ಬರುವುದಿಲ್ಲ.

Also Read  ಕೆಲಸ ಹುಡುಕುತ್ತಿದ್ದೀರಾ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

12)      ಬಲಭಾಗಕ್ಕೆ ಅಥವಾ ಎಡಭಾಗಕ್ಕೆ ತಿರುಗುವಾಗ  ಯಾವತ್ತೂ  ಇಂಡಿಕೇಟರ್ ಸೂಚನೆ ಮೊದಲೇ ನೀಡತಕ್ಕದ್ದು. ಇಂಡಿಕೇಟರ್ ಬಳಸದೇ ಅಚಾನಕ್ಕಾಗಿ ಎಡಕ್ಕೆ ಅಥವಾ ಬಲಕ್ಕೆ ತಿರುಗಿಸಬೇಡಿ. ಎಡಭಾಗಕ್ಕೆ ತಿರುಗುವ ಅವಶ್ಯಕತೆ ಇದ್ದಲ್ಲಿ ರಸ್ತೆಯ ಎಡಭಾಗದಲ್ಲಿ ಇರಿ, ಬಲಭಾಗಕ್ಕೆ ತಿರುಗುವುದಿದ್ದಲ್ಲಿ ನಿಧಾನವಾಗಿ ರಸ್ತೆಯ ಮಧ್ಯ ಭಾಗದಿಂದ  ಬಲಕ್ಕೆ ಬಂದು ಇಂಡಿಕೇಟರ್ ಬಳಸಿ ಬಲಕ್ಕೆ ತಿರುಗಿ.

13)      ಹೈವೇಗಳಲ್ಲಿ ಚಲಿಸುವಾಗ ಲೇನ್‍ ಗಳನ್ನು ಕಾರಣವಿಲ್ಲದೆ ಬದಲಿಸಬೇಡಿ. ಲೇನ್  ಡಿಸಿಪ್ಲಿನ್ ಅಥವಾ ಶಿಸ್ತನ್ನು ಕಾಪಾಡಿಕೊಳ್ಳಿ.

14)      ಅಂಬುಲೆನ್ಸ್ ಅಥವಾ ಅಗ್ನಿಶಾಮಕ ವಾಹನ ಬರುವಾಗ ನೀವು ಬದಿಗೆ ಸರಿದು ವೇಗ ಕಡಿಮೆ ಮಾಡಿ ವಾಹನಗಳಿಗೆ ದಾರಿ ಬಿಟ್ಟುಕೊಡಬೇಕು.

15)      ಏಕಮುಖ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಬಹಳ ಅಪಾಯಕಾರಿ. ಯಾವತ್ತೂ ಈರೀತಿ ಮಾಡಬೇಡಿ.

16)      ವೃತ್ತಗಳಲ್ಲಿನ ಸಿಗ್ನಲ್‍ ಗಳನ್ನು ಗೌರವಿಸಿ. ರೆಡ್ ಸಿಗ್ನಲ್‍ ಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ. ಸಿಗ್ನಲ್‍ ಗಳನ್ನು ದಾಟಿ ಕಾನೂನು ದಿಕ್ಕರಿಸುವುದು ಜೀವಕ್ಕೆ ಮಾರಕ.

17)      ನಿಮ್ಮ ವಾಹನಗಳಲ್ಲಿ ಅಗತ್ಯಕ್ಕಿಂತ ಜಾಸ್ತಿ ಜನರನ್ನು ಕೂರಿಸಿಕೊಳ್ಳಬೇಡಿ.  ಇದು ಕಾನೂನು ಬಾಹಿರ ಮತ್ತು ಮಾರಣಾಂತಿಕ.

18)      ಅಪಾಯಕಾರಿ ವಸ್ತುಗಳಾದ ಸ್ಫೋಟಕ ವಸ್ತುಗಳು ಮತ್ತು ದ್ರವ್ಯಗಳನ್ನು ವಾಹನಗಳಲ್ಲಿ  ಯಾವತ್ತೂ ಸಾಗಿಸಬೇಡಿ.

19)      ನೀವು ವಾಹನ ಚಾಲನೆ ಮಾಡುತ್ತಿರುವಾಗ ನಿಮ್ಮ ಬಳಿ ವಾಹನ ದಾಖಲೆಗಳು ಮತ್ತು ವಾಹನ ಚಾಲನಾ ಲೈಸೆನ್ಸ್ ಇರತಕ್ಕದ್ದು.

20)      ನಿಮ್ಮ ವಾಹನ ಚಾಲನೆಗೆ ಯೋಗ್ಯವಲ್ಲದಿದ್ದಲ್ಲಿ,  ಅದರಿಂದ ಉಂಟಾಗುವ ಸಾವು-ನೋವುಗಳಿಗೆ  ನೀವೇ ಹೊಣೆಗಾರರಾಗುತ್ತೀರಿ. ಕಮರ್ಷಿಯಲ್ ವಾಹನಗಳಲ್ಲಿ ಫಿಟ್‍ ನೆಸ್ ಸರ್ಟಿಫಿಕೇಟ್ ಅತೀ ಅಗತ್ಯ.

ಕೊನೆ ಮಾತು:  ರಸ್ತೆ ಸುರಕ್ಷತಾ ನಿಯಮಗಳ್ನು  ನಮಗೆ ಮತ್ತು ಇತರ ಪಾದಾಚಾರಿಗಳ  ರಕ್ಷಣೆಗಾಗಿ  ರೂಪಿಸಲಾಗಿದ್ದು, ನಾವೆಲ್ಲರೂ  ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಈ ರಸ್ತೆ ಸುರಕ್ಷತಾ ನಿಯಮಗಳನ್ನು ಪೊಲೀಸರು ಇರುವಾಗ ಮಾತ್ರ ಅನುಸರಿಸಿ, ಉಳಿದ ಸಮಯದಲ್ಲಿ ಅಡ್ಡಾದಿಡ್ಡಿ ಚಲಿಸುವುದು ಅತ್ಯಂತ ಅಪಾಯಕಾರಿ. ಈ ಎಲ್ಲಾ ಕಾನೂನುಗಳು ಪೊಲೀಸರಿಗಾಗಿ ಮಾಡಿದ್ದಲ್ಲ ಅಥವಾ ದಂಡ ವಿಧಿಸಿ  ಸರಕಾರದ ಖಜಾನೆ ತುಂಬಿಸಲು ಮಾಡಿದ್ದು ಅಲ್ಲ. ಎಲ್ಲರ ಹಿತ ಮತ್ತು ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನು ರೂಪಿಸಲಾಗಿದೆ. ರಸ್ತೆ ಸುರಕ್ಷತೆಯಿಂದ ನಮ್ಮೆಲ್ಲರ ಜೀವ ರಕ್ಷಣೆಯಾಗುತ್ತದೆ ಎಂಬುದನ್ನು ಅರಿತು ಪಾಲಿಸಿದರೆ  ರಸ್ತೆಯಲ್ಲಿ ರಕ್ತದಾನ ಮತ್ತು ಜೀವದಾನ ಮಾಡುವುದು ತಪ್ಪಿಸಬಹುದು. ಆ ಮೂಲಕ ಸುಂದರ ಸುದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಆಗುವುದರಲ್ಲಿ ಎರಡು ಮಾತೇ ಇಲ್ಲ.

Also Read  ಮದುವೆ ವಿಳಂಬದ ಸಮಸ್ಯೆಗೆ ಈ ರೀತಿ ಮಾಡಿ.

 

ಡಾ|| ಮುರಲೀ ಮೋಹನ್ ಚೂಂತಾರು

            ಸಮಾದೇಷ್ಟರು

     ಜಿಲ್ಲಾ ಗೃಹರಕ್ಷಕ ದಳ

    ದ.ಕ.ಜಿಲ್ಲೆ, ಮಂಗಳೂರು

error: Content is protected !!
Scroll to Top