(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ರೈತರ ಮನೆ ಬಾಗಿಲಲ್ಲಿ ರೋಗಗ್ರಸ್ತ ಜಾನುವಾರುಗಳಿಗೆ ತಜ್ಞ ಪಶು ವೈದ್ಯಕೀಯ ಸೇವೆ ನೀಡುವ ಸಲುವಾಗಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ಆಂಬುಲೆನ್ಸ್ ವಾಹನ ಸೌಲಭ್ಯವನ್ನು ಒದಗಿಸಲಾಗಿದೆ.
ಈ ಯೋಜನೆಗೆ ರಾಜ್ಯ ಪಶು ಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ವಿ ಚವ್ಹಾಣ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆಯನ್ನು ನೀಡಿದ್ದಾರೆ. ಸುಸಜ್ಜಿತ ಆಂಬುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಾದ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆಗಾಗಿ ಅವಕಾಶ, 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, 200 ಕೆ.ಜಿ. ತೂಕ ಸಾಮರ್ಥ್ಯದ ಶಸ್ತ್ರ ಚಿಕಿತ್ಸಾ ಟೇಬಲ್, ಎಸಿ ವ್ಯವಸ್ಥೆ, ಪಶುವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನಗಳು, ವಾಶ್ ಬೇಸಿನ್ ಗಳನ್ನು ಒಳಗೊಂಡಿದೆ. ಪಶುಪಾಲಕರ ಸಹಾಯವಾಣಿ 1962ಕ್ಕೆ ಕರೆಮಾಡಿ ಅವಶ್ಯಕ ಮತ್ತು ತುರ್ತು ಸೇವೆ ನೀಡಲು ರೈತರು ಬಳಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.