ಉಳ್ಳಾಲ: ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಗೂ ಅವಹೇಳನಕಾರಿ ಬರಹವಿದ್ದ ಫ್ಲೆಕ್ಸ್ ಪತ್ತೆ..! ➤ ಆರೋಪಿಗಳನ್ನು ಬಂಧಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 20. ಇಲ್ಲಿ‌ನ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಯಾರೋ ಕಿಡಿಗೇಡಿಗಳು ಕಾಂಡಮ್ ಗಳನ್ನು ಹಾಕಿದ್ದಲ್ಲದೆ, ಸಿಎಂ ಬಿಎಸ್ ವೈ ಮತ್ತು ಅವರ ಪುತ್ರನ ಭಾವಚಿತ್ರಕ್ಕೆ ಶಿಲುಬೆಯ ಚಿತ್ರ ಬಿಡಿಸಿ, ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ವಿಕೃತಿ ಮೆರೆದ ದೃಶ್ಯ ಕಂಡುಬಂದಿದೆ.

ಪ್ರತೀ ತಿಂಗಳ ಸಂಕ್ರಾತಿಯಂದು ಇಲ್ಲಿನ ಸೇವಾ ಸಮಿತಿಯವರು ಕಾಣಿಕೆ ಡಬ್ಬಿಯ ಹಣ ತೆಗೆಯುವ ವಾಡಿಕೆಯಿದ್ದು, ಈ ಬಾರಿ ಸ್ವಲ್ಪ ತಡವಾಗಿ ಮಂಗಳವಾರ ಸಂಜೆ ಕಾಣಿಕೆ‌ ಡಬ್ಬಿ ತೆರೆದು ನೋಡಿದಾಗ ಕಾಂಡೋಮ್ ಗಳು ಮತ್ತು ಪ್ರಚೋದನಕಾರಿ ಬರಹಗಳಿದ್ದ ಬೆಂಗಳೂರಿನ K.R.I.D .L ನಿಗಮ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಶುಭಕೋರಿದ ಪ್ಲೆಕ್ಸ್ ಒಂದು ಲಭಿಸಿದೆ. ಇದರಲ್ಲಿ ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಅಮಿತ್ ಷಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರ ಭಾವ ಚಿತ್ರಗಳಿದ್ದು ಎಲ್ಲವನ್ನೂ ಗೀಚಿ ವಿರೂಪಗೊಳಿಸಲಾಗಿದೆ. ಅಲ್ಲದೇ ಬಿ.ಎಸ್.ವೈ ಮತ್ತು ಅವರ ಪುತ್ರ ವಿಜಯೇಂದ್ರ ಫೋಟೊದ ಕತ್ತಲ್ಲಿ ಶಿಲುಬೆಯ ಹಾರದ ಚಿತ್ರ ಬಿಡಿಸಲಾಗಿದೆ. “ದೇವಲೋಕದಿಂದ ಹೊರಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು ವಿಗ್ರಹಗಳ ಮೂಲಕ ಭೂಲೋಕದ ಜನರನ್ನು ಭ್ರಷ್ಟರನ್ನಾಗಿಸಿ ನಕಲಿ ದೇವರಾಗಿ ಅನಾದಿ ಕಾಲದಿಂದ ಮೆರೆಯಲ್ಪಡುತ್ತಿವೆ, ಎಚ್ಚರ. ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ, ಬಾಚಿ ತಿಂದು ತೇಗುವ ಈ ಹಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹೊಡೆದು ಕೊಲ್ಲ ಬೇಕಾಗಿದೆ. ಜನರು ಸಿದ್ಧರಾಗಬೇಕು ಎಂದು ಪ್ಲೆಕ್ಸಲ್ಲಿ ಬರೆಯಲಾಗಿದೆ. ಈ ಕುರಿತು ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

Also Read  ಮಕ್ಕಳಲ್ಲಿ ವೈರಾಣು ಜ್ವರ ಪ್ರಕರಣ ಶೇ 25 – 30 ರಷ್ಟು ಏರಿಕೆ ಎಚ್ಚರಿಕೆ ವಹಿಸುವಂತೆ ವೈದ್ಯರ ಸೂಚನೆ    

error: Content is protected !!
Scroll to Top