(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 19. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ಮುಸ್ಲಿಮ್ ಸಂಘಟನೆಯು ಜ.22ರಂದು ಬೆಂಗಳೂರು ಬಂದ್ ಗೆ ಕರೆ ನೀಡಿದೆ.
ಈ ಹಿನ್ನೆಲೆ ಬಂದ್ ಶಾಂತಿಯುತವಾಗಿ ನಡೆಯಲಿದೆ ಎಂದು ಕರ್ನಾಟಕ ಮುಸ್ಲಿಮ್ ಸಂಘಟನೆಯ ಒಕ್ಕೂಟಗಳ ಸಮನ್ವಯಕಾರ ಮಸೂದ್ ಅಬ್ದುಲ್ ಖಾದರ್ ಪ್ರತಿಕ್ರಿಯಿಸಿದ್ದಾರೆ. ಲವ್ ಜಿಹಾದ್ ಹಾಗೂ ಕೃಷಿ ವಿರೋಧಿ ಕಾಯ್ದೆಗಳನ್ನು ನಿಷೇಧಿಸಬೇಕು, ಡಿಜೆಹಳ್ಳಿ ಹಾಗೂ ಕೆಜೆಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಎಸ್.ಡಿಪಿಐ ಮುಖಂಡ ಮುಝಮ್ಮಿಲ್ ಪಾಷಾ ಸೇರಿದಂತೆ 421 ಜನರನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಇಡಲಾಗಿದೆ. ಬಂದ್ ಶಾಂತಿಯುತವಾಗಿ ನಡೆಯಲಿದ್ದು, ಯಾವುದೇ ಪ್ರತಿಭಟನೆಗಳು ಇರುವುದಿಲ್ಲ. ಗುಂಪು ಗೂಡುವಂತಹ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಸ್ವಯಂ ಪ್ರೇರಿತವಾಗಿ ಬೆಂಗಳೂರಿನಲ್ಲಿ ಇರುವ ಮುಸ್ಲಿಮರು ಶುಕ್ರವಾರ ಎಲ್ಲ ಉದ್ಯಮಗಳನ್ನು ಬಂದ್ ಮಾಡಿ ಮನೆಯಲ್ಲಿರಬೇಕು. ಬೆಳಗ್ಗಿನಿಂದ ಸಂಜೆಯವರೆಗೆ ಮುಸ್ಲಿಮರ ಅಂಗಡಿಗಳು ಬಂದ್ ಆಗಲಿದೆಯೆಂದು ಅವರು ತಿಳಿಸಿದ್ದಾರೆ.