(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ದಿ. ಉಸ್ತಾದ್ ಮೋಹನ್ ದಾಸ್ ಮಾಸ್ಟರ್ ರವರು ಸ್ಥಾಪಿಸಿದ ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆ (ರಿ), ಉರ್ವ, ಮಂಗಳೂರು ಇದರ ಸುವರ್ಣ ಮಹೋತ್ಸವ ಇತ್ತೀಚಿಗೆ ಉರ್ವ ಮೈದಾನದಲ್ಲಿ ನಡೆಯಿತು. ಶಾಸಕ ವೇದವ್ಯಾಸ ಕಾಮತ್ ಅವರು ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮೇಯರ್ ದಿವಾಕರ್ ಪಾಂಡೇಶ್ವರ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರಾದ ಕೆ.ರಾಮ ಭಟ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಎಮ್. ಸುರೇಶ್ಚಂದ್ರ ಶೆಟ್ಟಿ. ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೋಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಸ್ಥಳೀಯ ಮನಪಾ ಸದಸ್ಯ ಗಣೇಶ್ ಕುಲಾಲ್, ಬೋಳೂರು ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಚಿತ್ರನಟ ರೂಪೇಶ್ ಶೆಟ್ಟಿ, ಬರ್ಕೆ ಠಾಣಾ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟಿ, ಬಿಜೆಪಿ ಮುಖಂಡ ರಾಧಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಹಲವಾರು ವರ್ಷಗಳಿಂದ ಶ್ರೀ ವೀರ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ಮಣ್ಣಿನ ಕುಸ್ತಿ ತರಬೇತು ಪಡೆದು ಮಣ್ಣಿನ ಕುಸ್ತಿ ಸ್ಫರ್ದೆಯಲ್ಲಿ ತುಳುನಾಡ ಕುಮಾರ ಪ್ರಶಸ್ತಿ ಪಡೆದ ದ.ಕ.ಜಿಲ್ಲಾ ಕುಸ್ತಿ ಅಸೋಸಿಯೇಶನ್ ನ ಸಂಘಟಕ ವಿಶು ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ರೂವಾರಿಗಳಾದ ಚಂದ್ರ ಶೇಖರ್ ದೇವಾಡಿಗ ಪೊಳಲಿ ಹಾಗೂ ಶ್ರೀಮತಿ ಶಂಕರಿ ದೇವಾಡಿಗ ಪೊಳಲಿ ಇವರು ಉಪಸ್ಥಿತರಿದ್ದರು.
ಶಿವದೂತೆ ಗುಳಿಗೆ – ನಾಟಕ ಪ್ರದರ್ಶನ
ಸಭಾಕಾರ್ಯಕ್ರಮದ ಬಳಿಕ ಕಲಾಸಂಗಮ ಕಲಾವಿದರಿಂದ ತುಳುರಂಗಭೂಮಿಯಲ್ಲಿ ಸಂಚಲನ ಮೂಡಿಸಿದ, ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ “ಶಿವದೂತೆ ಗುಳಿಗೆ” ಎಂಬ ವಿಭಿನ್ನ ಶೈಲಿಯ ತುಳು ನಾಟಕ ಪ್ರದರ್ಶನಗೊಂಡಿತು.