(ನ್ಯೂಸ್ ಕಡಬ) newskadaba.com ಮಂಗಳೂರು, ಜ. 18. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಇದರ ಜಂಟಿ ಆಶ್ರಯದಲ್ಲಿ ಭಾನುವಾರದಂದು ನಗರದ ಮಂಗಳಾದೇವಿ ಸಮೀಪದ ಮಾರಿಗುಡಿ ದೇವಸ್ಥಾನ, ಬೋಳಾರ ಇಲ್ಲಿನ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಅವರು ಪರಿಸರ ಸ್ವಚ್ಛತೆಗೆ ಪ್ರತಿಯೊಬ್ಬರು ಪ್ರಾಮುಖ್ಯತೆ ನೀಡಬೇಕು. ನಮ್ಮ ಸುತ್ತಮುತ್ತಲಿನ ಗುಡಿ ಗೋಪುರ, ರಸ್ತೆ , ಪಾರ್ಕ್ ಹೀಗೆ ಎಲ್ಲ ಸಾರ್ವಜನಿಕ ಸ್ಥಳಗಳನ್ನು ನಾವು ಆಸಕ್ತಿ ವಹಿಸಿ ಶುಚಿಯಾಗಿಟ್ಟುಕೊಳ್ಳಬೇಕು. ನಮ್ಮ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡುವ ಹಾಗೆ ಪರಿಸರದ ಸ್ವಚ್ಛತೆಗೂ ನಾವು ಮೊದಲ ಆದ್ಯತೆ ನೀಡಬೇಕು. ಪರಿಸರ ಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು. ಪರಿಸರ ಸ್ವಚ್ಛತೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಆರೋಗ್ಯಪೂರ್ಣ ಸಮಾಜದಿಂದ ಸುದೃಢ ಮತ್ತು ಸುಭೀಕ್ಷವಾದ ದೇಶ ಕಟ್ಟಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು. ಈ ಸ್ವಚ್ಛತಾ ಅಭಿಯಾನದಲ್ಲಿ ಬೋಳಾರ ಮಾರಿಗುಡಿ ದೇವಸ್ಥಾನದ ಮುಜರಾಯಿ ಇಲಾಖೆಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಮತಿ ಪುಷ್ಪಲತಾ, ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಭಟ್, ದೇವಸ್ಥಾನದ ಕಛೇರಿ ಸಿಬ್ಬಂದಿಗಳಾದ ಶ್ರೀ ಭುಜಂಗ ಶೆಟ್ಟಿ ಮತ್ತು ಶ್ರೀ ಅರವಿಂದ್ ಹಾಗೂ ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ಭಾಸ್ಕರ್ ಎಂ., ಅಶೋಕ್ ಕುಮಾರ್, ಶ್ರೀಮತಿ ರಾಜಶ್ರೀ, ರಮೇಶ್ ಭಂಡಾರಿ ಮುಂತಾದವರು ಭಾಗವಹಿಸಿದ್ದರು. ಸುಮಾರು 30 ಮಂದಿ ಗೃಹರಕ್ಷಕರು ಮತ್ತು ಪೌರರಕ್ಷಣಾ ತಂಡದ ಸದಸ್ಯರು ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಬೆಳಗ್ಗೆ 7.00 ರಿಂದ 9.00 ಗಂಟೆಯವರೆಗೆ ಸುಮಾರು 2 ಗಂಟೆಗಳ ಕಾಲ ಈ ಅಭಿಯಾನ ನಡೆಯಿತು.